ಜಿಲ್ಲೆ

ಶಿವಮೊಗ್ಗದಲ್ಲೂ ಏನಾದ್ರೂ ಅಪರಾಧ ನಡೆದಿರುತ್ತಿತ್ತಾ?: ಪೊಲೀಸ್ ಕಾರ್ಯಾಚರಣೆ ವೇಳೆ ತಲ್ವಾರ್-ಡ್ಯಾಗರ್​ಗಳು ಪತ್ತೆ..

Webdesk - Ravikanth

ಶಿವಮೊಗ್ಗ: ಪೊಲೀಸರು ಕೂಡಲೇ ಮುನ್ನೆಚ್ಚರಿಕೆ ವಹಿಸಿರದಿದ್ದರೆ ಶಿವಮೊಗ್ಗದಲ್ಲೂ ಏನಾದರೂ ಆಘಾತಕಾರಿ ಘಟನೆ ನಡೆದಿರುತ್ತಿತ್ತಾ? ಎಂಬ ಪ್ರಶ್ನೆ ಉದ್ಭವಿಸುವಂಥ ಪ್ರಕರಣ ನಡೆದಿದೆ. ಏಕೆಂದರೆ ಇಲ್ಲಿನ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ತಲ್ವಾರ್​ ಮತ್ತು ಡ್ಯಾಗರ್​ಗಳು ಪತ್ತೆಯಾಗಿವೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಶಿವಮೊಗ್ಗ ನಗರದಲ್ಲಿ ಹೈ ಅಲರ್ಟ್ ಜೊತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದರು.

ಇಂದು ಸಂಜೆಯಿಂದ 3 ಗಂಟೆಗಳ ಕಾಲ ಶಿವಮೊಗ್ಗ ಪೊಲೀಸರು 50 ಚೆಕ್ ಪೋಸ್ಟ್​​ಗಳ ಮೂಲಕ ವಾಹನ ಹಾಗೂ ವ್ಯಕ್ತಿಗಳ ತಪಾಸಣೆ ಮಾಡಿದ್ದರು. ಅಲ್ಲದೆ 30 ವರ್ಷದೊಳಗಿನ ಯುವಕರ ಜೊತೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನೂ ತಪಾಸಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ತಲ್ವಾರ್​ ಹಾಗೂ ಡ್ಯಾಗರ್​ಗಳು ಪತ್ತೆಯಾಗಿವೆ.

ರೌಡಿಶೀಟರ್​ಗಳ ಮನೆಗಳನ್ನೂ ತಪಾಸಣೆ ಮಾಡಲಾಗಿದ್ದು, ವೈನ್ ಶಾಪ್ ಸುತ್ತಮುತ್ತ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕುಡಿಯುವವರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಒಂದು ತಲ್ವಾರ್​, 4 ಹರಿತವಾದ ಡ್ಯಾಗರ್​ಗಳು ಸಿಕ್ಕಿದ್ದು, 350 ಐಎಂವಿ ಕೇಸ್, 11 ಅಬಕಾರಿ ಹಾಗೂ 93 ಲಘು ಪ್ರಕರಣ ಮತ್ತು ಜೊತೆಗೆ 96 ತಂಬಾಕು ಕೇಸ್ ಹಾಗೂ 10 ಗಾಂಜಾ ಸೇವನೆ ಕೇಸ್​ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.