ಜಿಲ್ಲೆ

ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ಆತ್ಮಹತ್ಯೆ ಪ್ರಕರಣ: 11 ಜನರ ವಿರುದ್ಧ ಎಫ್‌ಐಆರ್

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಲ ಪಡೆದವರ ಮಾನಸಿಕ ಕಿರುಕುಳದಿಂದಾಗಿಯೇ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರಿ ರಶ್ಮಿ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಸಿಇಓ ಸಂತೋಷ ಕುಮಾರ್, ರವಿ ಐತಾಳ, ರಾಕೇಶ್, ಶ್ರೀಪಾದ ಹೆಗಡೆ ಮತ್ತು ಪ್ರಶಾಂತ್ ಎಂಬುವರ ಕಿರುಕುಳವೇ ತನ್ನ ತಂದೆಯ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ರಶ್ಮಿ ತಿಳಿಸಿದ್ದಾರೆ. ಇದನ್ನೂ ಓದಿ: 31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

ಬ್ಯಾಂಕ್‌ನ ಬೋರ್ಡ್ ಸದಸ್ಯರ ಅನುಮತಿಯಂತೆ ಹಲವರಿಗೆ ಸಾಲ ನೀಡಲಾಗಿತ್ತು. ಆದರೆ 2019ರಲ್ಲಿ ಆರ್‌ಬಿಐ ಆಡಿಟ್ ವೇಳೆ ಸರಿಯಾಗಿ ದತ್ತಾಂಶ ನೀಡಲಿಲ್ಲ. ಆರ್‌ಬಿಐ ಪರಿವೀಕ್ಷಣೆ ವೇಳೆ ತಮ್ಮ ತಂದೆ ಕಡೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿತ್ತು. ಬ್ಯಾಂಕಿನ ಮುಖ್ಯ ಕಚೇರಿ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇದ್ದರೂ ಅವ್ಯವಹಾರದ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು ಸಂಶಯ ಉಂಟು ಮಾಡಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ನಮ್ಮ ತಂದೆಯವರಿಗೆ ಬ್ಯಾಂಕ್ ವಹಿವಾಟಿನ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದೆ ಇದ್ದುದರಿಂದ ಕಂಪ್ಯೂಟರ್ ಪಾಸ್‌ವರ್ಡ್ ಅನ್ನು ಸಹೋದ್ಯೋಗಿಗಳಿಗೆ ನೀಡಿದ್ದರು. ತಮ್ಮ ತಂದೆ ಮಾಡದ ತಪ್ಪಿಗೆ ಅವರನ್ನು ಹೊಣೆಗಾರಿಕೆ ಮಾಡಲಾಗಿದೆ. ಆದ್ದರಿಂದ ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಡೆತ್ ನೋಟ್ ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ರಘುನಾಥ್, ರೆಡ್ಡಿ ಬ್ರದರ್ಸ್, ಕುಮರೇಶ್, ರಜತ್, ತಲ್ಲಂ ಸೇರಿ ಹಲವರ ಹೆಸರುಗಳನ್ನು ನಮೂದಿಸಿದ್ದಾರೆ. ಸುಬ್ರಮಣ್ಯಪುರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.