ಬೆಂಗಳೂರು: ಕೆಜಿ ಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಿವು ಅವರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸನ್ಮಾನ ಮಾಡಿ ಶಿವು ಅವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಬಕ್ರೀದ್ ಹಬ್ಬ ಹಿನ್ನಲೆಯಲ್ಲಿ ಕಮಿಷನರ್ ಕಮಲ್ ಪಂತ್ ನಿನ್ನೆ ರಾತ್ರಿ ಸಿಟಿ ರೌಂಡ್ಸ್ ನಡೆಸಿದರು. ಶಿವಾಜಿನಗರ, ಕೆಜಿಹಳ್ಳಿ, ಡಿಜೆಹಳ್ಳಿ, ಗೋವಿಂದಪುರ, ಜೆಜೆನಗರ, ಪಾದರಾಯನಪುರ, ಚಾಮರಾಜಪೇಟೆ, ಹೆಣ್ಣೂರು, ಬಾಣಸವಾಡಿ ಹಾಗೂ ಕೋರಮಂಗಲ ಸೇರಿ ಹಲವು ಠಾಣೆಗೆ ಪೊಲೀಸ್ ಆಯುಕ್ತರು ಭೇಟಿ ನೀಡಿದರು.
ಭೇಟಿಯ ವೇಳೆ ಕಮಲ್ ಪಂತ್ರನ್ನು ಮುಸಲ್ಮಾನ್ ಬಾಂಧವರು ಭೇಟಿ ಮಾಡಿ ಸನ್ಮಾನಿಸಲು ಮುಂದಾದರು. ಈ ವೇಳೆ ಸನ್ಮಾನ ಮಾಡಬೇಕಿರುವುದು ನನಗಲ್ಲ, ಸದಾಕಾಲ ಕ್ಷೇತ್ರದಲ್ಲಿ ಸಾರ್ವಜನಿಕರ ಸೇವೆ ಮಾಡುವ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಎಂದರು.
ಕಾನ್ಸ್ಟೇಬಲ್ ಶಿವು ಕೆಜಿಹಳ್ಳಿ ಏರಿಯಾದ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದರು. ಕೆಜಿಹಳ್ಳಿಯಲ್ಲಿನ ಪೊಲೀಸ್ ಗಸ್ತು ಹಾಗೂ ಬೀಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್ ಪಂತ್, ತಮಗಾಗಿ ಸಾರ್ವಜನಿಕರು ತಂದಿದ್ದ ಶಾಲು, ಪೇಟ ಮತ್ತು ಹಾರವನ್ನು ಕಾನ್ಸ್'ಟೇಬಲ್ಗೆ ತೋಡಿಸಿ ಸನ್ಮಾನಿಸಿದರು.
ಕೆಜಿಹಳ್ಳಿ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಡಿಸಿಪಿ ಹಾಗೂ ಎಸಿಪಿಗೆ ಕೇಳಿದ ಕಮಲ್ಪಂತ್, ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಣ್ಣ ಸಕ್ರಿ ಕಾನ್ಸ್'ಟೇಬಲ್ ಶಿವು ಹೆಸರನ್ನ ಸೂಚಿಸಿದ್ದಾರೆ. ಈ ವೇಳೆ ನೈಟ್ ಬೀಟ್ನಲ್ಲಿದ್ದ ಕಾನ್ಸ್'ಟೇಬಲ್ ಶಿವುರನ್ನು ಕೆಜಿಹಳ್ಳಿ ಠಾಣೆಗೆ ಕರೆಸಿದ ಕಮಿಷನರ್, ಸಾರ್ವಜನಿಕರ ಮುಂದೆ ಶಿವುಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದರು. (ದಿಗ್ವಿಜಯ ನ್ಯೂಸ್)