More

    ಒಲಿಂಪಿಕ್ಸ್ ಕ್ರೀಡಾಸ್ಫೂರ್ತಿ; ಅದ್ಭುತ ಕ್ಷಣಗಳ ಸಂಕ್ಷಿಪ್ತ ಮೆಲುಕು

    ಒಲಿಂಪಿಕ್ಸ್ ಎಂದರೆ ಬರೀ ಪದಕ ಗೆಲುವಿನ ಪೈಪೋಟಿಯಲ್ಲ. ಅದನ್ನೂ ಮೀರಿದ ಒಲಿಂಪಿಕ್ಸ್ ವಿಶೇಷತೆ ಎಂದರೆ ಕ್ರೀಡಾಸ್ಫೂರ್ತಿ. ಪದಕ ಗೆಲುವಿಗಿಂತ ಮಾನವೀಯತೆ, ಸ್ನೇಹ-ಸೌಹಾರ್ದತೆ, ಸ್ಪರ್ಧೆ ಮುಗಿಸುವುದು ಮತ್ತು ನಿಯಮಪಾಲನೆಗಳು ಮುಖ್ಯವಾದುದು ಎಂಬ ಸಂದೇಶಗಳು ಹಲವು ಬಾರಿ ಸಾರಲ್ಪಟ್ಟಿವೆ. ಒಲಿಂಪಿಕ್ಸ್ ಇತಿಹಾಸದಲ್ಲಿ ದಾಖಲಾಗಿರುವ ಅಂಥ ಅದ್ಭುತ ಕ್ಷಣಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.

    ಗೆಳೆತನಕ್ಕೆ ಪದಕ ತುಂಡಾಯ್ತು!

    1936ರ ಬರ್ಲಿನ್ ಒಲಿಂಪಿಕ್ಸ್ ಪೋಲ್​ವಾಲ್ಟ್ ನಲ್ಲಿ ಸ್ಪರ್ಧಿಸಿದ ಜಪಾನ್​ನ ಗೆಳೆಯರಾದ ಶುಹಿ ನಶಿದ ಮತ್ತು ಸುಯಿಯೊ ಒಯಿ 2ನೇ ಸ್ಥಾನದಲ್ಲಿ ಸಮಬಲ ಸಾಧಿಸಿದರು. ಇದರಿಂದ ಇಬ್ಬರ ನಡುವೆ ಟೈಬ್ರೇಕರ್ ಏರ್ಪಡಿಸಲು ಸಂಘಟಕರು ಮುಂದಾದರೂ ಅವರಿಬ್ಬರು ಸ್ನೇಹ ಮರೆತು ಪರಸ್ಪರ ಸ್ಪರ್ಧೆಗಿಳಿಯಲು ನಿರಾಕರಿಸಿದರು. ಇದರಿಂದ ನಶಿದ ಬೆಳ್ಳಿ ಮತ್ತು ಒಯಿ ಕಂಚು ಗೆದ್ದಿದ್ದಾರೆಂದು ಘೋಷಿಸಿದರೂ, ಪದಕ ಸ್ವೀಕರಿಸಿದ ಬಳಿಕ ಅವರಿಬ್ಬರು ಅದನ್ನು ತುಂಡರಿಸಿದ್ದರು. ಬಳಿಕ ಬೆಳ್ಳಿ-ಕಂಚಿನ ಪದಕಗಳ ಅರ್ಧ ಭಾಗಗಳನ್ನು ಜೋಡಿಸಿ ’ಸ್ನೇಹದ ಪದಕ’ ರೂಪಿಸಿದ್ದರು.

    ಪದಕ ಗೆಲುವಿಗೆ ಬೋಟ್ ಕೊಡುಗೆ

    ಕ್ರೊವೇಷಿಯಾದ ಸೈಲರ್​ಗಳಾದ ಕೋಸ್ಟೊವ್ ಮತ್ತು ಕುಪಾಕ್ 2008ರ ಬೀಜಿಂಗ್ ಒಲಿಂಪಿಕ್ಸ್​ನ ಪುರುಷರ 49 ಸ್ಕಿಪ್ ಕ್ಲಾಸ್ ರೇಸ್​ನಲ್ಲಿ ಫೈನಲ್​ಗೂ ಅರ್ಹತೆ ಗಳಿಸಿರಲಿಲ್ಲ. ಆದರೆ ಅವರ ಬೋಟ್ ಸ್ವರ್ಣ ಪದಕ ಗೆದ್ದಿತ್ತು! ಡೆನ್ಮಾರ್ಕ್​ನ ಜೋನಸ್ ವಾರೆನ್ ಮತ್ತು ಮಾರ್ಟಿನ್ ಕಿರ್ಕೆಟರ್ಪ್ ಅವರ ಬೋಟ್​ಗೆ ಹಾನಿಯಾಗಿದ್ದರಿಂದ ಅವರು ಫೈನಲ್​ಗೇರಿದರೂ ಸ್ಪರ್ಧಿಸಲು ಸಾಧ್ಯವಾಗದಿರುವ ಅಪಾಯಕ್ಕೆ ಸಿಲುಕಿದ್ದರು. ಆಗ ಕೋಸ್ಟೊವ್ ಮತ್ತು ಕುಪಾಕ್ ತಮ್ಮ ಬೋಟ್​ಅನ್ನು ಅವರಿಬ್ಬರಿಗೆ ಬಿಟ್ಟುಕೊಟ್ಟಿದ್ದರು. ಆ ಬಾಡಿಗೆ ಬೋಟ್​ನಲ್ಲಿ ಸ್ಪರ್ಧಿಸಿದ್ದ ವಾರೆನ್ ಮತ್ತು ಕಿರ್ಕೆಟರ್ಪ್ ಚಿನ್ನ ಜಯಿಸಿದ್ದರು.

    ಸ್ಪರ್ಧೆ ಮುಗಿಸುವುದೇ ಗೆಲುವು

    ಒಲಿಂಪಿಕ್ಸ್​ನಲ್ಲಿ ಫಲಿತಾಂಶಕ್ಕಿಂತ ಸ್ಪರ್ಧೆಯನ್ನು ಮುಗಿಸು ವುದೇ ಪ್ರಮುಖವಾದುದು ಎಂದು ತೋರಿಸಿಕೊಟ್ಟವರು ಬ್ರಿಟನ್ ಓಟಗಾರ ಡೆರೆಕ್ ರೆಡ್ಮಂಡ್ ಮತ್ತು ಅವರ ತಂದೆ ಜಿಮ್ 1992ರ ಒಲಿಂಪಿಕ್ಸ್​ನ 400 ಮೀಟರ್ ಓಟದ ಸೆಮಿಫೈನಲ್​ನಲ್ಲಿ ಚಿನ್ನ ಗೆಲುವಿನ ಫೇವರಿಟ್ ಎನಿಸಿದ್ದ ರೆಡ್ಮಂಡ್ ಸ್ನಾಯು ಸೆಳೆತದಿಂದಾಗಿ ಓಟದ ನಡುವೆಯೇ ಬಿದ್ದರು. ಇದರಿಂದಾಗಿ ಅವರ ಪದಕದಾಸೆ ಭಗ್ನಗೊಂಡರೂ, ಸ್ಪರ್ಧೆ ಮುಗಿಸುವ ಆಸೆ ಬಿಡಲಿಲ್ಲ. ಹೀಗಾಗಿ ಕುಂಟುತ್ತಲೆ ಸ್ಪರ್ಧೆ ಮುಗಿಸಲು ಮುಂದಾದರು. ಆಗ ಟ್ರಾ್ಯಕ್​ಗೆ ಬಂದ ತಂದೆ ಜಿಮ್ ಮಗನಿಗೆ ಹೆಗಲು ನೀಡಿ ಸ್ಪರ್ಧೆ ಮುಗಿಸಲು ನೆರವಾದರು. ಕೊನೆಗೆ ಇಬ್ಬರೂ ಜತೆಯಾಗಿ ಫಿನಿಶ್ ಲೈನ್ ತುಳಿದಾಗ ಇಡೀ ಕ್ರೀಡಾಂಗಣದಲ್ಲಿ ಹಷೋದ್ಗಾರ ಆವರಿಸಿತ್ತು.

    ಗೆಲುವಲ್ಲ, ನ್ಯಾಯ ಮುಖ್ಯ

    ಒಲಿಂಪಿಕ್ಸ್ ಎಂದರೆ ಗೆಲುವಿಗಿಂತ ಸ್ಪರ್ಧೆಯೇ ಪ್ರಮುಖ ಎನ್ನುತ್ತಾರೆ. ಇನ್ನು ಕೆಲ ಸ್ಪರ್ಧಿಗಳು ನ್ಯಾಯೋಚಿತ ಗೆಲುವೇ ಮುಖ್ಯ ಎನ್ನುತ್ತಾರೆ. ಅದಕ್ಕೆ ಅತಿದೊಡ್ಡ ನಿದರ್ಶನ ಬ್ರಿಟನ್​ನ ಕತ್ತಿವರಸೆ ಪಟು ಜುಡಿ ಗಿನ್ನೆಸ್. 1932ರ ಲಾಸ್ ಏಂಜಲಿಸ್ ಒಲಿಂಪಿಕ್ಸ್​ನ ಫೆನ್ಸಿಂಗ್ ಸ್ಪರ್ಧೆಯ ಫೈನಲ್​ನಲ್ಲಿ ಗಿನ್ನೆಸ್, ಆಸ್ಟ್ರಿಯಾದ ಎಲ್ಲೆನ್ ಪ್ರೀಸ್ ವಿರುದ್ಧ ಚಿನ್ನ ಜಯದತ್ತ ಮುನ್ನಡೆದಿದ್ದರು. ತೀರ್ಪಗಾರರು ಇನ್ನೇನು ಗಿನ್ನೆಸ್ ವಿಜೇತರಾಗಿದ್ದಾರೆ ಎಂದು ಘೋಷಿಸುವುದರಲ್ಲಿದ್ದರು. ಆಗ ಗಿನ್ನೆಸ್, ತೀರ್ಪಗಾರರು ಪ್ರೀಸ್​ಗೆ 2 ಟಚ್ ಪಾಯಿಂಟ್​ಗಳನ್ನು ಮಿಸ್ ಮಾಡಿರುವುದನ್ನು ಗಮನಕ್ಕೆ ತಂದರು. ಕೊನೆಗೆ ಪ್ರೀಸ್ 1 ಅಂಕದ ಅಂತರದಿಂದ ಗೆದ್ದು ಚಿನ್ನ ಪಡೆದರೆ, ಗಿನ್ನೆಸ್ ಬೆಳ್ಳಿಗೆ ತೃಪ್ತಿಪಟ್ಟರು. ಆದರೆ ಅವರ ಕ್ರೀಡಾಸ್ಪೂರ್ತಿ ಒಲಿಂಪಿಕ್ಸ್ ಇತಿಹಾಸದಲ್ಲಿ ಚಿರಾಯುವಾಯಿತು.

    ಉಷಾಗೆ ನಿರಾಸೆ, ಚಿನ್ನ ಗೆದ್ದ ಅಥ್ಲೀಟ್ ಕಣ್ಣೀರು!

    1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್​ನಲ್ಲಿ ಪಿಟಿ ಉಷಾ 100ನೇ ಒಂದು ಸೆಕೆಂಡ್​ನಿಂದ ಕಂಚಿನ ಪದಕದಿಂದ ವಂಚಿತರಾಗಿದ್ದರು. ಪಯ್ಯೋಲಿ ಎಕ್ಸ್​ಪ್ರೆಸ್ ಖ್ಯಾತಿಯ ಪಿಟಿ ಉಷಾ ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ 55.42 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 55.41 ಸೆಕೆಂಡ್​ಗಳಲ್ಲಿ ಓಡಿದ್ದ ರೊಮೇನಿಯಾದ ಕ್ರಿಸ್ಟಿಯಾನಾ ಕೊಜೊಕರುಗೆ ಕಂಚು ಒಲಿದಿತ್ತು. ಪದಕ ಕೈತಪ್ಪಿದ ನಿರಾಸೆಯಲ್ಲಿ ಉಷಾ ಅವರಷ್ಟೇ ಅಲ್ಲ, 54.61 ಸೆಕೆಂಡ್​ಗಳಲ್ಲಿ ಓಡಿ ಸ್ವರ್ಣ ಜಯಿಸಿದ್ದ ಮೊರೊಕ್ಕೊದ ನವಲ್ ಎಲ್ ಮೌಟವಕೆಲ್ ಕೂಡ ಕಣ್ಣೀರು ಹಾಕಿದ್ದರು! ಒಲಿಂಪಿಕ್ಸ್ ಸ್ವರ್ಣ ಜಯಿಸಿದ ಆಫ್ರಿಕಾದ ಮೊದಲ ಮುಸ್ಲಿಂ ಮಹಿಳೆ ಎಂಬ ಇತಿಹಾಸ ಬರೆದಿದ್ದ ನವಲ್, ‘ಪಿಟಿ ಉಷಾ ನನಗೆ ಆಪ್ತಗೆಳತಿಯೂ ಆಗಿದ್ದರಿಂದ ಆಕೆಯ ನೊವು ಏನೆಂದು ನಾನು ಅರ್ಥಮಾಡಿಕೊಂಡಿದ್ದೆ. ಅವರು ಕೂಡ ನನ್ನೊಂದಿಗೆ ಪೋಡಿಯಂ ಏರಬೇಕೆಂದು ಬಯಸಿದ್ದೆ’ ಎಂದು ನಂತರ ಹೇಳಿಕೊಂಡಿದ್ದರು. ಆ ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಹಾಕಿ ತಂಡ ಕೂಡ ಪದಕವಂಚಿತವಾಗಿದ್ದ ಕಾರಣ ಪಿಟಿ ಉಷಾ ಮೇಲೆ ಪದಕ ನಿರೀಕ್ಷೆಯ ಭಾರವಿತ್ತು.

    ಹೃದಯ ಗೆದ್ದಿದ್ದರು ಕನ್ನಡತಿ ಜೆಜೆ ಶೋಭಾ

    ಭಾರತೀಯರು ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲದಿರಬಹುದು. ಆದರೆ ಸ್ಪರ್ಧೆಯ ಸ್ಪೂರ್ತಿ ಯನ್ನು ಎಂದೂ ಬಿಟ್ಟುಕೊಟ್ಟವರಲ್ಲ. 2004ರ ಅಥೆನ್ಸ್ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಅಥ್ಲೀಟ್ ಜೆಜೆ ಶೋಭಾ ಇದಕ್ಕೊಂದು ಜ್ವಲಂತ ನಿದರ್ಶನ. ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧಿಯಾಗಿದ್ದ ಶೋಭಾ ಜಾವೆಲಿನ್ ಥ್ರೋ ಸ್ಪರ್ಧೆಯ ವೇಳೆ ಗಾಯ ಗೊಂಡರು. ಇದರಿಂದ ಅವರನ್ನು ಸ್ಟ್ರೆಚರ್​ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆಗಲೂ ಸ್ಪರ್ಧೆಯ ಜೋಶ್ ಕಳೆದುಕೊಳ್ಳದ ಶೋಭಾ ಹೆಪ್ಟಾಥ್ಲಾನ್​ನ ಅಂತಿಮ ಸ್ಪರ್ಧೆಯಾದ 800 ಮೀಟರ್ ಓಟದಲ್ಲಿ ಭಾಗವಹಿಸಲು ಮರಳಿದ್ದರು. ಆ ಓಟದಲ್ಲಿ ಅವರು ಸ್ಪರ್ಧೆ ಮುಗಿಸಿದ್ದು ಮಾತ್ರವಲ್ಲದೆ 3ನೇ ಸ್ಥಾನ ಗಳಿಸಿದ್ದರು. ಇದರಿಂದ ಒಟ್ಟಾರೆ 11ನೇ ಸ್ಥಾನ ಒಲಿದಿತ್ತು. ಓಟ ಮುಗಿದ ಬಳಿಕ ಶೋಭಾರನ್ನು ಮತ್ತೆ ಸ್ಟ್ರೆಚರ್​ನಲ್ಲಿ ಕರೆದೊಯ್ಯಲಾಯಿತು. ಅದಾಗಲೆ ಕ್ರೀಡಾಂಗಣದಲ್ಲಿದ್ದ ಎಲ್ಲ ಪ್ರೇಕ್ಷಕರ ಹೃದಯವನ್ನು ಅವರು ಗೆದ್ದಿದ್ದರು. ಆ ಸ್ಪರ್ಧೆಯ ಸ್ವರ್ಣ ವಿಜೇತೆ ಸ್ವೀಡನ್​ನ ಕ್ಯಾರೊಲಿನಾ ಕ್ಲಫ್, ಬೆಳ್ಳಿ ವಿಜೇತೆ ಲಿಥುವೇನಿಯಾದ ಆಸ್ಟ್ರಾ ಸ್ಕುಜಿಟ್ ಕೂಡ ಆಗ ಚಪ್ಪಾಳೆಯ ಮೂಲಕ ಶೋಭಾರನ್ನು ಅಭಿನಂದಿಸಿದ್ದರು. ಆ ಸಾಹಸಿಕ ನಿರ್ವಹಣೆಗಾಗಿ ಶೋಭಾಗೆ ಬಳಿಕ ಅರ್ಜುನ ಪ್ರಶಸ್ತಿ ಒಲಿದಿತ್ತು.

    ಎದುರಾಳಿಯ ಟಿಪ್ಸ್​ನಿಂದ ಜಯ!

    ಅಮೆರಿಕದ ಜೆಸ್ಸಿ ಓವನ್ಸ್ 1936ರ ಬರ್ಲಿನ್ ಒಲಿಂಪಿಕ್ಸ್​ನಲ್ಲಿ 4 ಚಿನ್ನ ಗೆದ್ದು ಬೀಗಿದ್ದರು. ಆದರೆ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಎದುರಾಳಿ ಜರ್ಮನಿಯ ಲುಜ್ ಲಾಂಗ್ ಟಿಪ್ಸ್ ನೀಡದಿದ್ದರೆ ಅವರಿಗೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ಲಾಂಗ್ ಜಂಪ್ ಸ್ಪರ್ಧೆಯ ಮೊದಲೆರಡು ಪ್ರಯತ್ನಗಳಲ್ಲಿ ಓವನ್ಸ್ ಫೌಲ್ ಆಗಿದ್ದರು. 3ನೇ ಹಾಗೂ ಕೊನೇ ಪ್ರಯತ್ನಕ್ಕೆ ಮುನ್ನ ಅವರ ಬಳಿ ಬಂದ ಲುಜ್ ಲಾಂಗ್, ಟೇಕ್​ಆಫ್ ಬೋರ್ಡ್ ಗಿಂತ ಸ್ವಲ್ಪ ಇಂಚು ಹಿಂದಿನಿಂದಲೇ ಹಾರಲು ಪ್ರಯತ್ನಿಸುವಂತೆ ಸೂಚಿಸಿದ್ದರು. ಅದರಂತೆ ಹಾರಿ ಫೈನಲ್​ಗೇರಿದ ಓವನ್ಸ್ ಕೊನೆಗೆ ಚಿನ್ನ ಗೆದ್ದರೆ, ಲುಜ್ ಲಾಂಗ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

    ಅನರ್ಹಗೊಂಡ ಅಥ್ಲೀಟ್​ಗೆ ಪದಕ ಉಡುಗೊರೆ

    2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ನಿರೀಕ್ಷೆಯಂತೆಯೇ ಉಸೇನ್ ಬೋಲ್ಟ್ ಮೊದಲಿಗರಾಗಿ ಸ್ಪರ್ಧೆ ಪೂರೈಸಿ ಚಿನ್ನ ಗೆದ್ದರೆ, ಅವರ ಹಿಂದೆ ನೆದರ್ಲೆಂಡ್ಸ್​ನ ಚುರಾಂಡಿ ಮಾರ್ಟಿನಾ ಮತ್ತು ಅಮೆರಿಕದ ವಾಲೆಸ್ ಸ್ಪಿಯರ್​ವುನ್ ಕ್ರಮವಾಗಿ 2 ಮತ್ತು 3ನೇ ಸ್ಥಾನದೊಂದಿಗೆ ಓಟ ಮುಗಿಸಿದ್ದರು. ಆದರೆ ಓಟದ ವೇಳೆ ಮಾರ್ಟಿನಾ ಮತ್ತು ಸ್ಪಿಯರ್​ವುನ್ ಲೇನ್ ತುಳಿದಿದ್ದಾರೆಂದು ಅವರನ್ನು ಅನರ್ಹಗೊಳಿಸಿ ಪದಕ ನೀಡಲಿಲ್ಲ. ಇದರಿಂದ 4ನೇ ಸ್ಥಾನ ಪಡೆದ ಅಮೆರಿಕದ ಶಾನ್ ಕ್ರೌಫೋರ್ಡ್​ಗೆ ಕ್ರಮವಾಗಿ ಬೆಳ್ಳಿ ಪದಕದ ಬಡ್ತಿ ಲಭಿಸಿತು. ಕ್ರೀಡಾಕೂಟದ ಬಳಿಕ ಮಾರ್ಟಿನಾ ಮನೆಗೆ ಕ್ರೌಫೋರ್ಡ್ ಕಡೆಯಿಂದ ಪಾರ್ಸೆಲ್ ಒಂದು ಬಂದಿತ್ತು. ಅದನ್ನು ತೆರೆದಾಗ ಅದರಲ್ಲಿ ‘ಇದು ನಿಮ್ಮದು’ ಎಂಬ ಬರಹದೊಂದಿಗೆ ಒಲಿಂಪಿಕ್ಸ್ ರಜತ ಪದಕದ ಉಡುಗೊರೆ ಇತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts