ಜಿಲ್ಲೆ

ಪೊಲೀಸರು ಡಿಜಿಟಲ್ ದಾಖಲೆ ತಿರಸ್ಕರಿಸುವಂತಿಲ್ಲ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ

Webdesk - Ravikanth

ಡಿಜಿ ಲಾಕರ್, ಎಂಪರಿವಾಹನ್ ಆ್ಯಪ್ ಬಳಸುವಂತೆ ಸಲಹೆ 

ಬೆಂಗಳೂರು: ವಾಹನ ಚಾಲಕ/ಸವಾರರಿಗೆ ಸಿಹಿಸುದ್ದಿ. ಪೊಲೀಸರು ವಾಹನ ತಡೆದು ತಪಾಸಣೆ ನಡೆಸುವ ವೇಳೆ ಚಾಲನ ಪರವಾನಗಿ (ಡಿಎಲ್) ಸೇರಿ ಎಲ್ಲ ದಾಖಲೆಗಳನ್ನು ನೀವು ಡಿಜಿಟಲ್ ರೂಪದಲ್ಲೇ ತೋರಿಸಬಹುದು.

ಈಗಾಗಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಪರಿಚಯಿಸಿರುವ ಡಿಜಿ ಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‌ಗಳಲ್ಲಿ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಪೊಲೀಸ್ ತಪಾಸಣೆ ವೇಳೆ ತೋರಿಸಬಹುದು. ಅದನ್ನು ಅಧಿಕೃತ ದಾಖಲೆ ಎಂದು ಪರಿಗಣಿಸುವಂತೆ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ದೇಶದ ಎಲ್ಲೆಡೆ ಡಿಜಿಟಲ್ ಕ್ರಾಂತಿ ಶುರುವಾಗಿದೆ. ಬೆಂಗಳೂರು ನಗರ ಪೊಲೀಸ್ ವಿಭಾಗವು ಡಿಜಿಟಿಲೀಕರಣದ ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲ ಸಮಯದಲ್ಲಿಯೂ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗಲು ಕಿರಿಕಿರಿ ಆಗುತ್ತಿದೆ. ಇದನ್ನು ತಪ್ಪಿಸಲು ಡಿಜಿ ಲಾಕರ್ ಮತ್ತು ಎಂಪರಿವಾಹನ್ ಮೊಬೈಲ್ ಆ್ಯಪ್ ಪರಿಚಯಿಸಲಾಗಿದೆ. ಸ್ಮಾರ್ಟ್‌ಪೋನ್ ಬಳಕೆದಾರರು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಚಾಲನ ಪರವಾನಗಿ, ನೋಂದಣಿ ಪ್ರಮಾಣ ಪತ್ರ, ವಿಮೆ, ಫಿಟ್‌ನೆಸ್ ಪ್ರಮಾಣ ಪತ್ರ, ಪರ್ಮಿಟ್, ವಾಯುಮಾಲಿನ್ಯ ಪ್ರಮಾಣ ಪತ್ರ ಸೇರಿ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ವಾಹನ ತಪಾಸಣೆ ವೇಳೆ ಅಧಿಕಾರಿಗಳು ಮೊಬೈಲ್​ಫೋನ್​ನಲ್ಲಿ ಡಿಜಿಟಲ್ ರೂಪದಲ್ಲಿರುವ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಡಿಜಿ ಲಾಕರ್ ಮತ್ತು ಎಂಪರಿವಾಹನ್ ಅಪ್ಲಿಕೇಷನ್‌ನಲ್ಲಿ ಡಿಜಿಟಲ್ ರೂಪದಲ್ಲಿರುವ ದಾಖಲೆಗಳು ಸ್ವೀಕಾರಾರ್ಹ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಸ್ಪಷ್ಟಪಡಿಸಿವೆ. ಅಲ್ಲದೆ, ಬೇರೆಯವರ ವಾಹನ ಅಥವಾ ಬಾಡಿಗೆ ವಾಹನ ಪಡೆದಿದ್ದರೆ ಚಾಲಕ/ಸವಾರ ಪೊಲೀಸ್ ತಪಾಸಣೆ ವೇಳೆ ಮಾಲೀಕರಿಂದ ಡಿಜಿಟಲ್ ದಾಖಲೆ ವರ್ಗಾವಣೆ ಮಾಡಿಸಿಕೊಂಡು ತೋರಿಸಬಹುದು. ಪೊಲೀಸರು ಇ-ಚಲನ್ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಬಹುದು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಡಿಜಿಟಲ್ ದಾಖಲೆಯ ಉಪಯೋಗಗಳು

  • ವಾಹನಗಳ ನಕಲಿ ದಾಖಲೆ ಹಾವಳಿ ತಡೆಗಟ್ಟಲು ಸಾಧ್ಯ
  • ಡಿಎಲ್-ಆರ್‌ಸಿ ಇನ್ನಿತರ ದಾಖಲೆ ಕಳೆದು ಹೋಗುತ್ತದೆ ಎಂಬ ಭಯವಿಲ್ಲ
  • ಸದಾಕಾಲ ದಾಖಲೆ ಇಟ್ಟುಕೊಂಡು ಹೋಗುವ ಪ್ರಮೇಯ ಇಲ್ಲ
  • ತುರ್ತುಸಂದರ್ಭದಲ್ಲಿ ವಾಹನ ಮಾಲೀಕರಿಂದ ದಾಖಲೆ ವರ್ಗಾವಣೆ ಮಾಡಿಸಿಕೊಳ್ಳಬಹುದು.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಪ್ರಕಾರ ಡಿಜಿಟಲ್ ದಾಖಲೆ, ಸ್ಮಾರ್ಟ್‌ಕಾರ್ಡ್, ಕಾಗದ ರೂಪದ ದಾಖಲೆ ಎಲ್ಲವೂ ಸರಿಸಮಾನ. ಯಾವುದನ್ನೂ ತಿರಸ್ಕರಿಸುವಂತಿಲ್ಲ. | ಡಾ.ಬಿ.ಆರ್. ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತ(ಸಂಚಾರ)