ಬೆಂಗಳೂರು: ವ್ಯಕ್ತಿಯೊಬ್ಬ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟು, ಆತನನ್ನು ಬಂಧಿಸುವ ಸಂದರ್ಭದಲ್ಲೂ ಪೊಲೀಸರೊಂದಿಗೇ ಇದ್ದ ದೂರುದಾರನ ಬಳಿಯೇ ಗಾಂಜಾ ಹಾಗೂ ಏರ್ಗನ್ ಕಂಡುಬಂದಿದೆ. ಅಷ್ಟಕ್ಕೂ ಹೀಗೆ ಸಿಕ್ಕಿಬಿದ್ದ ಆರೋಪಿ ಮಾಜಿ ಸಚಿವರೊಬ್ಬರ ಮೊದಲ ಪತ್ನಿಯ ಸಹೋದರ ಎಂಬ ಮಾಹಿತಿಯೂ ಹರಿದಾಡುತ್ತಿದೆ.
ಭರತ್ ಎಂಬ ವ್ಯಕ್ತಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾನೆ ಎಂದು ರತನ್ ಲಾಲ್ ಎಂಬಾತ ಕುಮಾರಸ್ವಾಮಿ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಸುಳಿವಿನ ಮೇರೆಗೆ ಧಾವಿಸಿದ್ದ ಪೊಲೀಸರು ಮಫ್ತಿಯಲ್ಲಿ ಬಂದು ಭರತ್ನನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ರತನ್ ಲಾಲ್ ಕೂಡ ಪೊಲೀಸರ ಜೊತೆಗಿದ್ದ.
ಮಫ್ತಿ ಪೊಲೀಸರ ಜತೆ ರತನ್ ಲಾಲ್ ಇದ್ದಿದ್ದನ್ನು ನೋಡಿದ ಸ್ಥಳೀಯರು ರತನ್ ಲಾಲ್ ಅಪಹರಣ ಮಾಡುತ್ತಿದ್ದಾನೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಆಗ ಸ್ಥಳಕ್ಕೆ ಬಂದ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಅಲ್ಲಿ ಕಾರ್ಯಾಚರಣೆ ಮಾಡಿದ್ದು, ಕುಮಾರಸ್ವಾಮಿ ಬಡಾವಣೆ ಪೊಲೀಸರು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..
ಈ ಸಂದರ್ಭದಲ್ಲಿ ರತನ್ ಲಾಲ್ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರಲ್ಲಿ ಏರ್ಗನ್ ಹಾಗೂ ಗಾಂಜಾ ಇರುವುದು ಪತ್ತೆಯಾಗಿದೆ. ಆತನನ್ನು ವಶಕ್ಕೆ ಪಡೆದ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಪೊಲೀಸ್ ವಶದಲ್ಲಿರುವ ಆರೋಪಿ ರತನ್ ಲಾಲ್ ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ಅವರ ಮೊದಲ ಪತ್ನಿಯ ಅಣ್ಣ ಎನ್ನಲಾಗಿದೆ.