ಬೆಂಗಳೂರು: ಸಂಚಾರ ಪೊಲೀಸರ ವ್ಯಾಪ್ತಿಯಲ್ಲಿ ಬರುವ ಟೋಯಿಂಗ್ ಸಿಬ್ಬಂದಿ ಮೇಲೆ ಇಂದು ಹಲ್ಲೆ ಮಾಡಿದ್ದ ಪ್ರಕರಣ ಭಾರಿ ಗಮನ ಸೆಳೆದಿದ್ದು, ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಇಂದು ಹಲಸೂರು ಸಂಚಾರಿ ಠಾಣಾ ವ್ಯಾಪ್ತಿಯ ಇಂದಿರಾನಗರ ಮೆಟ್ರೋ ಬಳಿ ಟೋಯಿಂಗ್ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ಉಂಟಾಗಿತ್ತು. ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನಗಳನ್ನೂ ಕೊಂಡೊಯ್ಯುತ್ತಿದ್ದಾರೆ ಎಂದು ಸಿಟ್ಟಾದ ಸಾರ್ವಜನಿಕರು ಟೋಯಿಂಗ್ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದರು.
ಸಾರ್ವಜನಿಕರ ಆಕ್ರೋಶಕ್ಕೆ ಬೆದರಿದ ಟೋಯಿಂಗ್ ಸಿಬ್ಬಂದಿ ವಾಹನಗಳನ್ನು ಟೋ ಮಾಡುವುದನ್ನು ಬಿಟ್ಟು ಓಡಿಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕೆಂಚೇಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.