ಜಿಲ್ಲೆ

ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ; ಐವರು ಪೆಡ್ಲರ್​ಗಳ ಬಂಧನ, 20ಕೆಜಿ ಗಾಂಜಾ ವಶ

lakshmihegde

ಬೆಂಗಳೂರು: ಉತ್ತರ ವಿಭಾಗದ ಪೊಲೀಸರು ಪ್ರತ್ಯೇಕ ಕಡೆ ಕಾರ್ಯಾಚರಣೆ ನಡೆಸಿ ಐವರು ಪೆಡ್ಲರ್‌ಗಳನ್ನು ಬಂಧಿಸಿ 20 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

ಪೀಣ್ಯ ಠಾಣೆ ಪೊಲೀಸರು ಎಂ.ಎಸ್. ಪಾಳ್ಯದ ಸಂತೋಷ್ (22) ಮತ್ತು ಮಂಜುನಾಥ್ (24) ಎಂಬುವರನ್ನು ಬಂಧಿಸಿ 2.3 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಮೂಲತಃ ತಮಿಳುನಾಡಿನವರಾದ ಪೆಡ್ಲರ್‌ಗಳು ಬಸವೇಶ್ವರ ಬಸ್‌ನಿಲ್ದಾಣ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 2017ರಲ್ಲಿ ಮಾಲೂರು ಠಾಣೆಯಲ್ಲಿ ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಗೂಂಡಾ ಕಾಯ್ದೆ ವಿಧಿಸಲಾಗಿತ್ತು. ಈ ಪ್ರಕರಣದಲ್ಲಿ ಜೈಲಿನ ಶಿಕ್ಷೆ ಅನುಭವಿಸಿ ಹೊರಬಂದು ಮತ್ತೆ ಹಳೇ ಚಾಳಿ ಮುಂದುವರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜಮಖಂಡಿಯ ಪಿಜಿಯಲ್ಲಿ ನೇಣು ಬಿಗಿದುಕೊಂಡ ಕಾಲೇಜು ವಿದ್ಯಾರ್ಥಿನಿ

ನೈಜೀರಿಯಾ ಪ್ರಜೆಗಳು

ರಾಜಗೋಪಾಲನಗರ ಠಾಣೆ ಪೊಲೀಸರು ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿ 2.26 ಕೆ.ಜಿ. ಗಾಂಜಾ ಮತ್ತು 6 ಗ್ರಾಂ ಕೊಕೇನ್ ವಶಕ್ಕೆ ಪಡೆದಿದ್ದಾರೆ. ಬಾಗಲೂರಿನ ಥಾಮಸ್ (46) ಮತ್ತು ಇಕೆಚುಕ್ವಾ ಡೇನಿಯಲ್ (39) ಬಂಧಿತರು. ತಮಿಳುನಾಡಿನಲ್ಲಿ ಟೀ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಈ ವೇಳೆ ರಾಜೇಶ್ ಎಂಬಾತನ ಪರಿಚಯವಾಗಿ ಆತನಿಂದ ಗಾಂಜಾ ಪಡೆದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

15 ಕೆಜಿ ಗಾಂಜಾ ಜಪ್ತಿ

ಶ್ರೀರಾಂಪುರ ಪೊಲೀಸರು ಸತ್ಯ (23) ಎಂಬಾತನನ್ನು ಬಂಧಿಸಿ 5 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ. ಈತನ ಜತೆಗೆ ಮತ್ತೊಬ್ಬ ಪೆಡ್ಲರ್ ಕೈ ಜೋಡಿಸಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.