ಜಿಲ್ಲೆ

ಪೊಳಲಿ ರಸ್ತೆ ತಿರುವಿಗೆ ಮುಕ್ತಿ : ನೇರ ಮಾಡಿ ಡಾಂಬರೀಕರಣ

ಸೌಮ್ಯ ಆರ್

ಬಂಟ್ವಾಳ: ತಾಲೂಕಿನ ಕಲ್ಪನೆಯಿಂದ ಪೊಳಲಿಗೆ ಹೋಗುವಾಗ ಸಿಗುತ್ತಿದ್ದ ಭಾರಿ ತಿರುವು ರಸ್ತೆಗೆ ಮುಕ್ತಿ ಸಿಕ್ಕಿದ್ದು, ಘಾಟಿಯಂತಿದ್ದ ರಸ್ತೆ ನೇರಗೊಂಡಿದೆ.

ಬಿ.ಸಿ.ರೋಡ್, ಬೆಂಜನಪದವು ಕಡೆಗಳಿಂದ ಬರುವ ವಾಹನಗಳಿಗೆ ಹಾಗೂ ಪೊಳಲಿ ಭಾಗದಿಂದ ಬಿ.ಸಿ.ರೋಡ್ ಕಡೆಗೆ ಬರುವ ವಾಹನಗಳಿಗೆ ಕಲ್ಪನೆ ಬಳಿಯ ಇಳಿಜಾರು ರಸ್ತೆಯಲ್ಲಿದ್ದ ದೊಡ್ಡ ತಿರುವು ಭಾರಿ ಸಮಸ್ಯೆಯಾಗಿತ್ತು. ಹಲವು ಬಾರಿ ಲೋಡ್ ತುಂಬಿದ್ದ ಭಾರಿ ವಾಹನಗಳು ಈ ಘಾಟಿಯಂತಿದ್ದ ತಿರುವು ರಸ್ತೆಯನ್ನು ಏರಲು ಸಾಧ್ಯವಾಗದೆ ಅಲ್ಲಿ ನಿಂತ ಉದಾಹರಣೆಯಿದೆ.

ಮೇಲ್ಭಾಗದಿಂದ ಬರುವ ವಾಹನಗಳನ್ನು ಬ್ರೇಕ್ ಅದುಮಿಕೊಂಡೇ ಚಲಾಯಿಸಬೇಕಿತ್ತು. ತಿರುವಿನಲ್ಲಿ ಮುಂಭಾಗದಿಂದ ಬರುವ ವಾಹನಗಳು ಕಾಣದೆ ಚಾಲಕರು ತೊಂದರೆ ಅನುಭವಿಸಿದ ಘಟನೆಗಳು ಇವೆ. ಕೆಲವು ಸಮಯದ ಹಿಂದೆ ವಾಹನವೊಂದು ನಿಯಂತ್ರಣಕ್ಕೆ ಸಿಗದೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದ ಘಟನೆಯೂ ನಡೆದಿತ್ತು. ಇದೀಗ ಈ ಭಾರಿ ತಿರುವಿಗೆ ಮುಕ್ತಿ ಸಿಕ್ಕಿದ್ದು, ತಿರುವು-ಮುರುವು ರಸ್ತೆಯನ್ನು ನೇರ ರಸ್ತೆಯನ್ನಾಗಿ ಬದಲಾಯಿಸಿ ಡಾಂಬರೀಕರಣಗೊಳಿಸಲಾಗಿದೆ.

ಪೊಳಲಿಯಲ್ಲಿ ಜಾತ್ರೆ ನಡೆಯುತ್ತಿರುವ ಸಂದರ್ಭ ತಿರುವು ರಸ್ತೆಗೆ ಮುಕ್ತಿ ಸಿಕ್ಕಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪೊಳಲಿಗೆ ಸಂಪರ್ಕಿಸುವ ರಸ್ತೆಯೂ ಮರು ಡಾಂಬರೀಕರಣಗೊಳ್ಳುತ್ತಿದ್ದು ರಸ್ತೆಯಲ್ಲಿದ್ದ ಹೊಂಡಗಳಿಗೂ ಮುಕ್ತಿ ಸಿಕ್ಕಿವೆ.