ಜಿಲ್ಲೆ

ಪೋಕ್ಸೋ ಪ್ರಕರಣ, ಆರೋಪಿ ಸೆರೆ

ಸೌಮ್ಯ ಆರ್

ಕಡಬ: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಪ್ರೀತಿಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ ವಿಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿ ಬಂಧಿತ ಆರೋಪಿ.

ಅಪ್ರಾಪ್ತೆ ಜತೆ ಪ್ರೀತಿಯ ನಾಟಕವಾಡಿ ಡಿ.30ರಂದು ಕುಂಬ್ರದಲ್ಲಿರುವ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಗರ್ಭ ನಿರೋಧಕ ಮಾತ್ರೆಗಳನ್ನೂ ನೀಡಿದ್ದಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಎಂದು ಅಪ್ರಾಪ್ತೆ ನೀಡಿದ ದೂರಿನಲ್ಲಿ ಉಲ್ಲೇಖಿದ್ದಾರೆ.

ಡಿ.31ರಂದು ರೂಂನಲ್ಲಿ ಇರುವಾಗಲೇ ವಿದ್ಯಾರ್ಥಿನಿ ತಂದೆಗೆ ಕರೆ ಮಾಡಿದ ವಿಚಾರವಾಗಿ ತಗಾದೆ ತೆಗೆದು ದೈಹಿಕ ಹಿಂಸೆ ನೀಡಿ ಜಗಳವಾಡಿದ್ದ. ಬಳಿಕ ರಂಗಿಪೇಟೆ ಬಳಿ ರಸ್ತೆ ಬದಿ ಬೈಕಿನಲ್ಲಿ ಬಿಟ್ಟು ಹೋಗಿದ್ದ. ಯುವತಿ ಆತನಿಗೆ ಕರೆ ಮಾಡಿದರೂ ಉತ್ತರಿಸದ ಹಿನ್ನೆಲೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದು ಫೋನ್ ಮೂಲಕ ಮನೆಯವರಿಗೆ ವಿಷಯ ತಿಳಿಸಿದ್ದಳು. ಮನೆ ಮಂದಿ ಧೈರ್ಯ ತುಂಬಿ ಮನೆಗೆ ಕರೆ ತಂದಿದ್ದರು. ಬೇರೆ ಹುಡುಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡು ಆ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದಲ್ಲದೆ ಹಲ್ಲೆ ಮಾಡಿದಾತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು.

ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.