ಜಿಲ್ಲೆ

ಪ್ರಧಾನಿ ಪ್ರವಾಸ ನಿಗದಿ; ಬೆಂಗಳೂರಿನ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಪ್ರಯಾಣ

Webdesk - Ravikanth

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೂ.20ರ ಬೆಂಗಳೂರು ಮತ್ತು ಜೂ.21ರ ಮೈಸೂರು ಪ್ರವಾಸ ನಿಗದಿಯಾಗಿದ್ದು, ತಾತ್ಪೂರ್ತಿಕ ಪ್ರವಾಸ ಪಟ್ಟಿಯಲ್ಲಿದ್ದ ಕಾರ್ಯಕ್ರಮಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಬೆಂಗಳೂರಿನ ಎರಡು ಕಾರ್ಯಕ್ರಮಗಳಿಗೆ ಆಕಾಶ ಮಾರ್ಗದ ಮುಖೇನ ಮೋದಿ ಬಂದಿಳಿಯಲಿದ್ದು, ಐಐಎಸ್​ಸಿ ಕಾರ್ಯಕ್ರಮ ಈ ಪಟ್ಟಿಯಲ್ಲಿಲ್ಲ. ಅಷ್ಟೇ ಅಲ್ಲ, ಬಿಜೆಪಿ ನಡೆಸಲು ಉದ್ದೇಶಿತ ರೋಡ್ ಶೋ ಸಾಧ್ಯತೆಗಳು ಕ್ಷೀಣಿಸಿವೆ.

ವಾಕ್ ಶ್ರವಣ ಸಂಸ್ಥೆಯಲ್ಲಿ ಉತ್ಕೃಷ್ಟತಾ ಕೇಂದ್ರ: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ 155.49 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಉತ್ಕೃಷ್ಟತಾ ಕೇಂದ್ರವನ್ನು ಜೂ.20ರಂದು ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸುವರು. ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ತಪಾಸಣೆ ಹಾಗೂ ಪುನಶ್ಚೇತನಕ್ಕಾಗಿ ಅಗತ್ಯವಿರುವ ವೃತ್ತಿಪರರು ಮತ್ತು ಅದರ ಲಭ್ಯತೆಯ ನಡುವಿನ ಅಂತರ ಕಡಿಮೆ ಮಾಡಲು ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು ಈ ಕೇಂದ್ರದ ಉದ್ದೇಶವಾಗಿದೆ.

ಶಾಲೆಗಳಲ್ಲಿ ಯೋಗ ದಿನಾಚರಣೆ: ಶಾಲೆಗಳಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಂದು ಅರ್ಧ ದಿನ ಶಾಲೆ ನಡೆಸಿ, ಇದರ ಬದಲಿಗೆ ಜೂ.25ರ ಶನಿವಾರ ಪೂರ್ಣ ದಿವಸ ಶಾಲೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.