ಬಂಟ್ವಾಳ: ಪ್ರಜ್ಞಾವಂತರ ಜಿಲ್ಲೆ ಎಂದೇ ಖ್ಯಾತಿವೆತ್ತ ದಕ್ಷಿಣ ಕನ್ನಡದಲ್ಲಿ ಜೀವನದಿ ‘ನೇತ್ರಾವತಿ’ಯು ಜಿಲ್ಲೆಯಲ್ಲಿ ನಾಗರಿಕ ಪ್ರಜ್ಞೆಯ ಅಧಃಪತನಕ್ಕೆ ಕನ್ನಡಿ ಹಿಡಿದಿದ್ದಾಳೆ. ಕರಾವಳಿಯ ಸಮೃದ್ಧಿಗೆ ಕಾರಣವಾಗಿರುವ ನೇತ್ರಾವತಿಯ ಒಡಲಿಗೆ ಅಗಾಧ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿಕೊಳ್ಳುತ್ತಿದ್ದು, ಇದು ತುಂಬೆ ವೆಂಟೆಡ್ ಡ್ಯಾಮ್ ಬಳಿ ಶೇಖರಣೆಯಾಗುತ್ತಿದ್ದು, ಜನರಲ್ಲಿ ನಾಗರಿಕ ಪ್ರಜ್ಞೆ ಕುಂದುತ್ತಿರುವುದಕ್ಕೆ ಸಾಕ್ಷಿ ಎಂಬಂತಿದೆ.
ಎಲ್ಲೆಂದರಲ್ಲಿ ಎಸೆದ ಪ್ಲಾಸ್ಟಿಕ್ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲ್‌ಗಳು ಭಾರೀ ಮಳೆ ಸುರಿದಾಗಲೆಲ್ಲ ಮಳೆ ನೀರಿನಲ್ಲಿ ಹರಿದು ಬರುತ್ತಿದೆ. ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ತುಂಬೆ ವೆಂಟೆಡ್ ಡ್ಯಾಂ ಬಳಿ ಪ್ಲಾಸ್ಟಿಕ್ ಬಾಟಲಿಗಳು ನದಿಯಲ್ಲಿ ತೇಲುತ್ತಿರುವ ದೃಶ್ಯ ಕಂಡು ಬಂತು. ಇದು ಜಿಲ್ಲೆಯ ವಿದ್ಯಾವಂತ ಜನರು ವಿದ್ಯೆಯ ನೈಜ ಗುಣಮಟ್ಟವನ್ನು ಅಣಕಿಸುವಂತಿತ್ತು.
ಪ್ಲಾಸ್ಟಿಕ್ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲ್‌ಗಳು ಜಲಮೂಲಗಳನ್ನು ಸೇರುತ್ತಿರುವುದರಿಂದ ಜಲಚರಗಳಿಗೂ ಸಂಕಷ್ಟ ಎದುರಾಗುತ್ತಿದೆ. ಮತ್ಯ ಸಂಕುಲದ ಸಂತತಿಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಜೀವಜಲದ ನೈರ್ಮಲ್ಯದ ಉದ್ದೇಶದಿಂದಲೂ, ಜಲಚರಗಳ ರಕ್ಷಣೆಯ ದೃಷ್ಟಿಯಿಂದಲೂ, ಮತ್ಯಸಂಕುಲದ ಕ್ಷೇಮದ ನಿಟ್ಟಿನಲ್ಲಿಯೂ ಜಲಮೂಲಗಳನ್ನು ಪ್ಲಾಸಿಕ್‌ನಿಂದ ಮುಕ್ತಗೊಳಿಸುವ ಪ್ರಯತ್ನಗಳು ಜಿಲ್ಲೆಯಾದ್ಯಂತ ಆಗಬೇಕಿದೆ. ಆಡಳಿತ ವ್ಯವಸ್ಥೆಯೂ ಈ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂಬ ಆಗ್ರಹವೂ ಪರಿಸರ ಪ್ರೇಮಿ ವಲಯದಲ್ಲಿ ವ್ಯಕ್ತವಾಗಿದೆ.