ಜಿಲ್ಲೆ

ವಿವಾದಕ್ಕೀಡಾಯಿತು ಪೀರನವಾಡಿ ವೃತ್ತದ ಬೃಹತ್​ ನಾಮಫಲಕ

malli

ಬೆಳಗಾವಿ: ಪೀರನವಾಡಿ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸ್ಥಳೀಯ ಕೆಲವರು ಬೃಹತ್ ನಾಮಫಲಕ ಸ್ಥಾಪಿಸಿದ್ದು ವಿವಾದಕ್ಕೀಡಾಯಿತು. ನಾಮಫಲಕದಲ್ಲಿ ದೊಡ್ಡ ದಪ್ಪ ಮರಾಠಿ ಅಕ್ಷರಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜ್​ ಚೌಕ್​ (ಚಿನ್ನಪಟ್ಟಣ) ಎಂದಿದ್ದು, ಕನ್ನಡದ ಹೆಸರು ಕೆಳಗೆ ಇದೆ. ಈ ವಿಚಾರವಾಗಿ ಈಗ ವಿವಾದ ಉಂಟಾಗಿದೆ.

ನಾಮಫಲಕ ಅನಾವರಣ ಕಾರ್ಯಕ್ರಮದ ಬೆನ್ನಿಗೆ ಕನ್ನಡಪರ ಹೋರಾಟಗಾರರು ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ನಾಮಫಲಕಗಳಲ್ಲಿ ಮೊದಲ ಆದ್ಯತೆ ಕನ್ನಡಕ್ಕೇ ಇರಬೇಕು. ನಂತರದ ಸ್ಥಾನ ಬೇರೆ ಭಾಷೆಗೆ ಎಂಬ ನಿಯಮವಿದ್ದರೂ ಎಂಇಎಸ್​ನವರು ಅದನ್ನು ಮೀರಿ ಸಾಮಾಜಿಕ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕನ್ನಡ ಹೋರಾಟಗಾರ ದೀಪಕ್ ಗುಡಗನಟ್ಟಿ ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದು, ನಿಯಮ ಪ್ರಕಾರವೇ ನಾಮಫಲಕ ಸ್ಥಾಪನೆಯಾಗಲಿ. ಅದನ್ನೂ ಸರ್ಕಾರವೇ ಮಾಡಲಿ. ಈಗ ಹಾಕಿರುವ ನಾಮಫಲಕ ತೆರವುಗೊಳಿಸಬೇಕು. ಕನ್ನಡದಲ್ಲಿ ವೃತ್ತದ ಹೆಸರು ದಪ್ಪ ಅಕ್ಷರಗಳಲ್ಲಿ ಇರುವ ನಾಮಫಲಕವನ್ನೇ ಇಲ್ಲಿ ಅಳವಡಿಸಬೇಕು. ಇಲ್ಲದೇ ಹೋದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ. (ದಿಗ್ವಿಜಯ ನ್ಯೂಸ್)