-ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಪ್ರವಾಸಿ ತಾಣವಾದ ಕೂಡ್ಲು ಫಾಲ್ಸ್‌ಗೆ ಬರುವ ಪ್ರವಾಸಿಗರು ಕೂಡ್ಲುಗೆ ಹೋಗುವ ನೆಲ್ಲಿಕಟ್ಟೆ ಕ್ರಾಸ್ ಬಳಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯ ಸೀತಾ ನದಿ ಸೇರುತ್ತದೆ. ಮೇ ಅಂತ್ಯದ ತನಕ ಕೂಡ್ಲು ಫಾಲ್ಸ್ ವೀಕ್ಷಣೆಗೆ ಅವಕಾಶವಿರುತ್ತದೆ. ಆಗುಂಬೆ ಹೋಗುವ ಪ್ರವಾಸಿಗರು ಈ ಸ್ಥಳದಲ್ಲಿ ಬಂದು ಅಂಗಡಿಗಳಿಂದ ಖರೀದಿಸಿದ ಲೇಸ್, ನೀರಿನ ಬಾಟಲ್, ತಿಂಡಿ ಪೊಟ್ಟಣಗಳನ್ನು ಅಲ್ಲಲ್ಲೇ ಎಸೆಯುತ್ತಿದ್ದಾರೆ. ಭಾನುವಾರ ಹಾಗೂ ಶನಿವಾರ ವಿಪರೀತ ಪ್ರಮಾಣದಲ್ಲಿ ಕಸ ಸಂಗ್ರಹ ಆಗುತ್ತದೆ.
ಪ್ರವಾಸಿಗರು ಎಸೆದ ಕಸ ಈಗ ನದಿ ದಡದಲ್ಲಿದೆ ಸದ್ಯಕ್ಕೆ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಸಮಸ್ಯೆ ಇಲ್ಲ. ಮಳೆಯಾದಾಗ ನದಿಯ ಹರಿವಿನ ಮಟ್ಟ ಹೆಚ್ಚಾಗಿ ತ್ಯಾಜ್ಯ ಕೊಚ್ಚಿಕೊಂಡು ಹೋಗುತ್ತದೆ. ಹೀಗಾಗಿ ಜೋರು ಮಳೆಯಾಗುವುದಕ್ಕಿಂತ ಮೊದಲು ಸಂಬಂಧಪಟ್ಟವರು ತೆರವುಗೊಳಿಸಬೇಕು.
ಅಲ್ಲಿರುವ ಕೆಲ ಗೂಡಂಗಡಿಗಳ ಮಾಲೀಕರು ಕಸದ ಬುಟ್ಟಿ ಇಟ್ಟಿದ್ದರೂ, ಪ್ರವಾಸಿಗರು ಕ್ಯಾರೇ ಎನ್ನದೆ ಪ್ಲಾಸ್ಟಿಕ್ ಕಸ ಎಸೆಯುತ್ತಿದ್ದಾರೆ. ನಾವು ಏನು ಮಾಡುವುದೆಂದು ಅಂಗಡಿಯವರು ಅಸಹಾಯಕತೆ ತೋಡಿಕೊಳ್ಳುತ್ತಾರೆ.
ನದಿಗೆ ಇಳಿಯದಂತೆ ಅಥವಾ ಹತ್ತಿರ ಸುಳಿಯದಂತೆ ಪ್ರವಾಸಿಗರು ನಿಲ್ಲುವ ಸ್ಥಳದ ಹತ್ತಿರ ಬೇಲಿ ನಿರ್ಮಿಸುವುದರ ಮೂಲಕ ಪ್ಲಾಸ್ಟಿಕ್ ನದಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು. ಅಲ್ಲದೆ ಪಂಚಾಯಿತಿ ವತಿಯಿಂದ ದೊಡ್ಡ ಪ್ರಮಾಣದ ಕಸದ ಬುಟ್ಟಿ ಇರಿಸಲು ಒತ್ತಾಯಿಸಿದ್ದಾರೆ.
ಅಲ್ಲಿಯೇ ಕೆಳಗಿರುವ ಸೀತಾ ನದಿ ಬ್ರಹ್ಮ ಸ್ಥಾನದ ಬಳಿ ಪ್ರವಾಸಿಗರು ಅಡುಗೆ ಮಾಡುತ್ತಾರೆ. ನಂತರ ಕಸ ಅಲ್ಲೇ ಎಸೆಯುತ್ತಾರೆ. ಈ ಸ್ಥಳದಲ್ಲಿ ಅಪಾಯಕಾರಿ ಸುಳಿ ಇದ್ದು ಅನೇಕ ಪ್ರವಾಸಿಗರು ಮೃತಪಟ್ಟಿದ್ದಾರೆ. ಅಲ್ಲದೆ ಮೋಜು ಮಸ್ತಿಗಾಗಿ ಅನೇಕ ಜನ ಬರುತ್ತಾರೆ.ಇವೆಲ್ಲವನ್ನು ನಿಯಂತ್ರಿಸಲು ಪಂಚಾಯಿತಿಯವರು ಸೂಕ್ತ ಕ್ರಮ ಜರುಗಿಸಬೇಕಾಗಿದೆ.
ಉತ್ತಮ ಮಳೆಯಾದಾಗ ನದಿ ತಟದ ಪ್ಲಾಸ್ಟಿಕ್ ಹೆಬ್ರಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಿಂಡಿ ಅಣೆಕಟ್ಟಿಗೆ ಬರುತ್ತದೆ. ಜನರು ಅದೇ ನೀರನ್ನು ಕುಡಿಯಲು ಹಾಗೂ ದಿನಪಯೋಗಕ್ಕೆ ಬಳಸುತ್ತಾರೆ.
ಪ್ರವಾಸಿಗರು ಹಾಕುವ ಕಸ ನಿಯಂತ್ರಿಸಲು ಸಿಸಿಟಿವಿ ಅಗತ್ಯ ಇದೆ. ಆಗುಂಬೆಯಿಂದ ಹೆಬ್ರಿಗೆ ಬರುವಾಗ ಅನೇಕ ಪ್ರವಾಸಿಗರು ಅಲ್ಲಲಿ ಕಸ ಎಸೆಯುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾದರೆ ಸಿಸಿಟಿವಿ ಅಗತ್ಯ ಇದೆ. ಇದು ರಾತ್ರಿ ಹೊತ್ತಿನಲ್ಲಿ ಮೋಜು ಮಸ್ತಿಯಿಂದ ಸೀತಾನದಿ ಮಲಿನಗೊಳಿಸುವವರನ್ನು ಕಣ್ಗಾವಲು ಇಡಲು ಸಹಕಾರಿ.
ರಾತ್ರಿ ಹೊತ್ತಿನಲ್ಲಿ ನೆಲ್ಲಿಕಟ್ಟೆ ಕ್ರಾಸ್‌ನಲ್ಲಿರುವ ಅಂಗಡಿ ಮುಂಗಟ್ಟುಗಳು ಬಂದ್ ಆದ ನಂತರ ಪಾರ್ಟಿ ನಡೆಯುತ್ತದೆ. ಈ ಸಮಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೀತಾ ನದಿ ಒಡಲು ಸೇರುತ್ತದೆ. ಪೋಲಿಸ್ ಇಲಾಖೆಯವರು ರಾತ್ರಿ ಹೊತ್ತಿನಲ್ಲಿ ಕೆಲವೊಮ್ಮೆ ರೌಂಡ್ಸ್ ಬಂದರೆ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸಬಹುದು.
ಪ್ರವಾಸಿಗರು ಕಸ ಹಾಕುತ್ತಿರುವ ಮಾಹಿತಿ ಬಂದಿದೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಅನುದಾನ ಮೀಸಲಿರಿಸಿ ಬೇಲಿ ನಿರ್ಮಾಣ ಮಾಡಲಾಗುವುದು. ಪಂಚಾಯಿತಿ ವತಿಯಿಂದ ಗೂಡಂಗಡಿಗಳಿಗೆ ಸ್ವಚ್ಛತೆ ಬಗ್ಗೆ ಮನವಿ ಮಾಡಿದಾಗ ಪ್ಲಾಸ್ಟಿಕ್ ತ್ಯಾಜ್ಯ, ತ್ಯಾಜ್ಯ ಸಂಗ್ರಾಹಕ ವಾಹನಕ್ಕೆ ನೀಡುತ್ತಿದ್ದಾರೆ.-ಶೀತಲ್, ಪಿಡಿಒ, ನಾಡ್ಪಾಲು ಗ್ರಾಪಂ
ನಾನು ಈಗಾಗಲೇ ವ್ಯಾಪ್ತಿಯ ವಲಯ ಅರಣ್ಯ ಅಧಿಕಾರಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆ ಮಾಡುವ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಪತ್ರ ಬರೆದಿದ್ದೇನೆ. ನೆಲ್ಲಿಕಟ್ಟೆ ಕ್ರಾಸ್ ಬಳಿ ಸೀತಾ ನದಿ ದಡದಲ್ಲಿ ಸಂಗ್ರಹವಾದ ಕಸ ನಿರ್ಮೂಲನೆಗೆ ಸೂಚಿಸಲಾಗುವುದು.-ಸತೀಶ್ ಎಸಿಎಫ್, ಅರಣ್ಯ ಇಲಾಖೆ ಮೂಡುಬಿದಿರೆ ಉಪವಿಭಾಗ
ಜನರು ಮನಬಂದಂತೆ ಎಸೆದ ಪ್ಲಾಸ್ಟಿಕ್ ತ್ಯಾಜ್ಯ ಸೀತಾ ನದಿ ಒಡಲು ಸೇರುತ್ತದೆ. ಹೆಬ್ರಿಯಿಂದ ಆಗುಂಬೆ ಹೋಗುವಾಗ ಅಲ್ಲಲ್ಲಿ ಪ್ಲಾಸ್ಟಿಕ್ ಕಸ ಸಂಗ್ರಹವಾಗಿದೆ. ಪರಿಸರ ರಕ್ಷಣೆ ಮಾಡಬೇಕಾದ ನಾವು ಮೃಗಗಳಿಗಿಂತ ಕಡೆಯಾಗಿ ವರ್ತಿಸುತ್ತಿರುವುದು ದುರಂತ.-ಜಯಕರ, ಪ್ರಯಾಣಿಕ