ಯಲಬುರ್ಗಾದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ, ಕಿರಿಯ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೇಲೇರಿ, ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಅಪರ ಸರ್ಕಾರಿ ವಕೀಲ ಎ.ಎಂ.ಶಂಕರಗೌಡ, ವಕೀಲ ಬಿ.ಎಂ.ಶಿರೂರು ಇದ್ದರು. 
ಜಿಲ್ಲೆ

ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಿ

Kopala - Desk - Eraveni

ಯಲಬುರ್ಗಾ: ರಾಷ್ಟ್ರೀಯ ಲೋಕ್ ಅದಾಲತ್ ಡಿ.9ರಂದು ನಡೆಯಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ದಾವೆದಾರರು ಹಾಗೂ ಕಕ್ಷಿದಾರರು ಭಾಗವಹಿಸಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ ತಿಳಿಸಿದರು.

ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಸಂಘ ಹಾಗೂ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಾರ್ವಜನಿಕರು ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹರಿಸಿಕೊಳ್ಳಲು ಸುವರ್ಣಾವಕಾಶವಾಗಿದೆ. ಕಡಿಮೆ ಖರ್ಚು ಇಲ್ಲವೇ ಖರ್ಚಿಲ್ಲದೇ ಶೀಘ್ರ ತೀರ್ಮಾನಕ್ಕಾಗಿ ಲೋಕ ಅದಾಲತ್ ವಿಶೇಷ ಅವಕಾಶವಾಗಿದೆ.

ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಸಂಧಾನ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ, ಒಪ್ಪಿಗೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿಯಲಿದೆ. ದಾಖಲಾಗದ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣ ರುಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು ಎಂದರು.

ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯದ ಪ್ರಕರಣ, ಬ್ಯಾಂಕ್ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕ, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ, ವೈವಾಹಿಕ ಮತ್ತು ಇತರ ಸಿವಿಲ್ ಪ್ರಕರಣ, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ,

ಖಾಯಂ ಜನತಾ ನ್ಯಾಯಾಲಯದಲ್ಲಿನ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣದ ಪ್ರಕರಣ, ಕಾರ್ಮಿಕ ವಿವಾದಗಳು, ವೈವಾಹಿಕ ಪ್ರಕರಣ, ಭೂಸ್ವಾಧೀನ ಪ್ರಕರಣ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣ ಹಾಗೂ ಪಿಂಚಣಿ ಪ್ರಕರಣ,

ಕಂದಾಯ ಪ್ರಕರಣ, ರಾಜೀಯಾಗಬಲ್ಲ ಸಿವಿಲ್ ಮತ್ತು ಇತರೆ ಪ್ರಕರಣಗಳ ಬಗ್ಗೆ ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕಿರಿಯ ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಬೇಲೇರಿ, ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಅಪರ ಸರ್ಕಾರಿ ವಕೀಲ ಎ.ಎಂ.ಶಂಕರಗೌಡ, ವಕೀಲರಾದ ಬಿ.ಎಂ.ಶಿರೂರು, ಈರಣ್ಣ ಕೋಳೂರು, ಅಂದಾನಗೌಡ ಪಾಟೀಲ್, ಕಳಕಪ್ಪ ಬೆಟಗೇರಿ,

ಮಲ್ಲನಗೌಡ ಪಾಟೀಲ್, ಭರಮಗೌಡ ಪಾಟೀಲ್, ಆರ್.ಜಿ.ಕುಷ್ಟಗಿಶೆಟ್ಟರ್, ಮಹಾಂತಗೌಡ ಪಾಟೀಲ್, ದಾದು ಎಲಿಗಾರ್, ಮಲ್ಲಿಕಾರ್ಜುನ್ ನಾಯ್ಕರ್, ಉಮಾ ಹಿರೇಮಠ ಇತರರಿದ್ದರು.