ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಉತ್ತೇಜನಕ್ಕೆ, ಹೆಚ್ಚು ಉದ್ಯೋಗಗಳ ಸೃಷ್ಟಿಗೆ ರಾಜ್ಯ ಸರ್ಕಾರ ಪ್ರಸ್ತಾಪಿಸಿದ್ದ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ಅಧ್ಯಾದೇಶಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಈ ಮೂಲಕ ಸುಗ್ರೀವಾಜ್ಞೆ ಜಾರಿಯಾಗಿದೆ.
ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ಇಲ್ಲದ್ದರಿಂದ ಮತ್ತು ಶೀಘ್ರ ಕ್ರಮ ತೆಗೆದುಕೊಳ್ಳುವ ಅಗತ್ಯವಿದ್ದರಿಂದ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ರಾಜ್ಯಪಾಲ ವಿ.ಆರ್.ವಾಲಾ ಸರ್ಕಾರದ ಪ್ರಸ್ತಾವನೆ ಗಮನಿಸಿ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಉತ್ಪಾದನಾ ಉದ್ಯಮ ಆರಂಭಿಸುವವರು ಉನ್ನತ ಮಟ್ಟದ ಅನುಮತಿ ನೀಡುವ ಸಮಿತಿಯಿಂದ ಅನುಮತಿ ಪಡೆದು ಬೇರೆ ಯಾವುದೇ ಎನ್ಒಸಿ ಪಡೆಯದಿದ್ದರೂ ಕೈಗಾರಿಕೆ ಆರಂಭಿಸಬಹುದು. ಉದ್ಯಮ ಆರಂಭವಾದ 3 ವರ್ಷದೊಳಗೆ ಅಗತ್ಯ ಅನುಮತಿ ಪಡೆದರಾಯಿತು. ಆದರೆ, ಯಾವುದೇ ಉತ್ಪಾದನಾ ಕೈಗಾರಿಕೆ ಅಥವಾ ಉದ್ಯಮ ಸ್ವೀಕೃತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ನೋಡಲ್ ಏಜೆನ್ಸಿಗೆ ನೀಡಿದ ಮುಚ್ಚಳಿಕೆ ಅಥವಾ ಸ್ವಯಂ ಪ್ರಮಾಣಪತ್ರದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪಾಲಿಸುವಲ್ಲಿ ವಿಫಲವಾದರೆ, ಯೋಜನೆ ಅನುಷ್ಠಾನಗೊಳಿಸುವಾಗ ಅನ್ವಯಿಸಬಹುದಾದ ಅಧಿನಿಯಮ ಉಲ್ಲಂಘಿಸಿದರೆ ದಂಡ ಕಟ್ಟಬೇಕಾಗುತ್ತದೆ. ಮೊದಲ ಅಪರಾಧಕ್ಕೆ 1 ಲಕ್ಷ ರೂ. ವರೆಗೆ ಜುಲ್ಮಾನೆ, 2ನೇ ಹಾಗೂ ಮುಂದುವರಿದ ಅಪರಾಧಕ್ಕಾಗಿ 2 ಲಕ್ಷ ರೂ.ವರೆಗೆ ವಿಸ್ತರಿಸಬಹುದು. ಜತೆಗೆ ಸಂಬಂಧಿತ ಇಲಾಖೆಗಳು ಅಧಿನಿಯಮ ಪ್ರಕರಣ ದಾಖಲಿಸಿ, ಕೈಗಾರಿಕೆ ಮುಚ್ಚಿಸಲು ಮತ್ತು ಭೂಮಿ ಮುಟ್ಟುಗೋಲು ಹಾಕುವುದಕ್ಕೂ ಅವಕಾಶವಿದೆ.
ಅನುಮತಿ ಹೇಗೆ?
ಉತ್ಪಾದನಾ ಕೈಗಾರಿಕೆಗಳು ಅಥವಾ ಉದ್ಯಮ ಗಳಿಂದ ಸಂಯೋಜಿತ ಅರ್ಜಿ ನಮೂನೆ ಸ್ವೀಕರಿಸಿದ ಮೇಲೆ ಸಂಬಂಧಪಟ್ಟ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯ/ಜಿಲ್ಲಾ ಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿ ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಸ್ವೀಕೃತಿ ಪ್ರಮಾಣಪತ್ರ ನೀಡಲಾಗುತ್ತದೆ. ಇದನ್ನು ಆಧಾರವಾಗಿಟ್ಟುಕೊಂಡು ಉದ್ಯಮ ಆರಂಭಿಸಬಹುದು.
ಯಾರಿಗೆ ವಿನಾಯಿತಿ?
ಕೈಗಾರಿಕೆಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಅಧಿನಿಯಮ 1951ರ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿ ಯಾವುದೇ ಕೈಗಾರಿಕೆಗೆ ಸಂಬಂಧಪಟ್ಟ ಸರಕುಗಳ ಉತ್ಪಾದನೆ ಅಥವಾ ತಯಾರಿಕೆಗೆ ಸಂಬಂಧಪಟ್ಟ ಸರಕುಗಳ ಉತ್ಪಾದನೆ, ತಯಾರಿಕೆಯಲ್ಲಿ ತೊಡಗಿರುವ ಉದ್ಯಮ, ಮೌಲ್ಯವರ್ಧನೆಯ ಪ್ರಕ್ರಿಯೆಯ ಕಾರ್ಖಾನೆ, ಯಂತ್ರ ಘಟಕ ಸ್ಥಾಪನೆಗೆ ಈ ಮಾರ್ಗದಲ್ಲಿ ಅವಕಾಶವಿದೆ. ಸರಳವಾಗಿ ಹೇಳಬಹು ದೆಂದರೆ ಹೊಸ ಸಾಮಗ್ರಿಗಳ ಸೃಜನೆ ಅಥವಾ ಮೌಲ್ಯ ವರ್ಧನೆಯಲ್ಲಿ ನಿರತ ಉದ್ಯಮಕ್ಕೆ ಅವಕಾಶ ಸಿಗಲಿದೆ.
ಜಿಲ್ಲಾ ಮಟ್ಟದ ಸಮಿತಿಗಳನ್ನೂ ತಿದ್ದುಪಡಿಗಳಡಿ ಸೇರಿಸಬೇಕು ಎಂದು ಎಫ್ಕೆಸಿಸಿಐ ಸೂಚಿಸಿತ್ತು. ನಮ್ಮ ವಿನಂತಿಯನ್ನು ಒಪ್ಪಿಕೊಂಡು ಡಿಎಲ್ಎಸ್ಡಬ್ಲು್ಯಸಿಸಿಯನ್ನು ಸೇರಿಸಲು ಪರಿಗಣಿಸಿದೆ. ಸರ್ಕಾರದ ತೀರ್ಮಾನ ವನ್ನು ಸ್ವಾಗತಿಸುತ್ತೇವೆ. | ಸಿ.ಆರ್. ಜನಾರ್ದನ ಎಫ್ಕೆಸಿಸಿಐ ಅಧ್ಯಕ್ಷ
ಮಾನಿಟರಿಂಗ್ ವ್ಯವಸ್ಥೆ
ಅರ್ಜಿ, ಪ್ರಸ್ತಾವನೆ, ಹೊರಡಿಸಿದ ಸ್ವೀಕೃತಿ ಪ್ರಮಾಣ ಪತ್ರದ ದಾಖಲೆಯ ನಿಗಾವಹಿಸುವುದು, ಅನುಮೋದನೆ ಅಥವಾ ಸ್ವೀಕೃತಿ ದತ್ತಾಂಶವನ್ನು ಆನ್ಲೈನ್ ಮೂಲಕ ನಿರ್ವಹಿಸಲಾಗುತ್ತದೆ. ಯಾವ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆಯೋ ಅಥವಾ ಯಾವ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆಯೋ ಆ ಉದ್ದೇಶಕ್ಕಾಗಿ ಭೂಮಿ ಪರಿಗಣಿಸಬೇಕು. ಪ್ರಮುಖ ನಕ್ಷೆಯಲ್ಲಿ ನಿರ್ದಿಷ್ಟ ಪಡಿಸಿದ ಭೂಮಿ ಬಳಕೆಯಲ್ಲಿ ಮಾರ್ಗ ಬದಲಿಸು ವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹಾಗೇ ಸ್ಪಷ್ಟ ಹಕ್ಕು ಇಲ್ಲದ ಭೂಮಿ, ವಿವಾದಿತ, ನಿರ್ಬಂಧಿತ ಪ್ರವರ್ಗ ಮುಂತಾದವುಗಳಡಿ ಬರುವ ಭೂಮಿಯನ್ನು ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮಕ್ಕೆ ನೀಡುವಂತಿಲ್ಲ ಎಂದೂ ಹೇಳಲಾಗಿದೆ. ಸ್ವಯಂ ಪ್ರಮಾಣಪತ್ರ ಒದಗಿಸುವ ಆಯ್ಕೆ ಮಾಡದಿದ್ದಲ್ಲಿ ಅರ್ಜಿದಾರರು ಕೈಗಾರಿಕೆ ರಚನೆ ಅಥವಾ ಸ್ಥಾಪನೆಗೆ ಮೊದಲು ಎಲ್ಲ ಅಗತ್ಯ ಅನುಮೋದನೆ ಪಡೆಯಬೇಕು. ಉದ್ಯಮಗಳು ಒದಗಿಸಬೇಕಾದ ಸ್ವಯಂ ಪ್ರಮಾಣಪತ್ರ ಅಫಿಡವಿಟ್ ಸ್ವರೂಪದಲ್ಲಿ ನೀಡ ಬೇಕಾಗುತ್ತದೆ. ಕೆಲವು ಕಾನೂನು, ನೀತಿ- ನಿಯಮಗಳ ಪ್ರಕಾರ ಉದ್ಯಮ ಆರಂಭಕ್ಕೆ ಮುನ್ನ ಹಲವು ಇಲಾಖೆಗಳಿಂದ ಅನುಮತಿ ಪಡೆಯಬೇಕಾದ್ದನ್ನು ತಪ್ಪಿಸಲು ಈ ಸುಗ್ರೀವಾಜ್ಞೆ ತರಲಾಗಿದೆ.