ಬೆಂಗಳೂರು: ಬುದ್ಧಿ ಮಾತು ಹೇಳಿದ ಕೋಪಕ್ಕೆ ಪಾಲಕರರ ಮೇಲೆ ಸೈಜ್ ಕಲ್ಲು ಎತ್ತಿ ಹಾಕಿ 14 ವರ್ಷದ ಬಾಲಕನೇ ಹತ್ಯೆ ಮಾಡಿರುವುದು ಪೀಣ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೀಣ್ಯದ ಕರಿಓಬನಹಳ್ಳಿ ಸಮೀಪದ ಜಿಲ್ಲಾ ಸಾಂಖ್ಯಿಕ ಕಚೇರಿಯಲ್ಲಿ ಕಾವಲುಗಾರ ಯಾದಗಿರಿ ಜಿಲ್ಲೆಯ ಹನುಮಂತರಾಯ (41) ಹಾಗೂ ಪತ್ನಿ ಹೊನ್ನಮ್ಮ (34) ದಂಪತಿ ಹತ್ಯೆ ನಡೆದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೃತರ ಇಬ್ಬರು ಮಕ್ಕಳನ್ನು ಪ್ರಶ್ನಿಸಿದಾಗ ದ್ವಂದ್ವ ಹೇಳಿಕೆಗಳು ನೀಡಿದ್ದರು. ಅನುಮಾನ ಬಂದು ಮಕ್ಕಳನ್ನು ತೀವ್ರವಾಗಿ ಪ್ರಶ್ನಿಸಿದಾಗ ಕೊಲೆ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಖ್ಯಿಕ ಕಚೇರಿಯಲ್ಲಿ ಕಾವಲುಗಾರ ಹನುಮಂತರಾಯ, ಕಚೇರಿ ಆವರಣದ ಶೆಡ್ನಲ್ಲಿ ಇಬ್ಬರು ಮಕ್ಕಳು ಮತ್ತು ಪತ್ನಿ ಜತೆ ನೆಲೆಸಿದ್ದ. ಅಡ್ಡದಾರಿ ತುಳಿದಿದ್ದ 2ನೇ ಮಗನ ಮೇಲೆ ಬೇಸರಗೊಂಡಿದ್ದ ತಂದೆ, "ವಿದ್ಯೆ ಕಲಿ. ಕೆಟ್ಟ ಚಾಳಿ ಬಿಡು' ಎಂದು ಬೈದು ಬುದ್ಧಿ ಮಾತು ಹೇಳಿದ್ದರು.
ಈ ಮಾತಿನಿಂದ ಕೆರಳಿದ ಮಗ, ತನ್ನ ತಂದೆಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದ. ಎರಡು ದಿನಗಳ ಹಿಂದೆಯೇ ತಂದೆ ಮೇಲೆ ಎತ್ತಿ ಹಾಕಲು ಸೈಜು ಕಲ್ಲನ್ನು ತಂದು ಸಾಂಖ್ಯಿಕ ಕಚೇರಿಯಲ್ಲಿ ಇಟ್ಟಿದ್ದ. ಎಂದಿನಂತೆ ಸಾಂಖ್ಯಿಕ ಕಚೇರಿಯ ಒಳಾವರಣದಲ್ಲಿ ಬುಧವಾರ ರಾತ್ರಿ ಮಲಗಲು ಹನುಮಂತರಾಯ ದಂಪತಿ ತೆರಳಿದ್ದರು. ಪಾಲಕರ ಜತೆ 2ನೇ ಮಗ ಸಹ ಮಲಗಲು ಹೋಗಿದ್ದ. ಬೆಳಗಿನ ಜಾವ 3 ಗಂಟೆಗೆ ಎಚ್ಚರಗೊಂಡ ಮಗ, ಪೂರ್ವಯೋಜಿತವಾಗಿ ತಂದಿಟ್ಟಿದ್ದ ಕಲ್ಲನ್ನು ತೆಗೆದುಕೊಂಡು ತಂದಿದ್ದು, ಕೈ ಜಾರಿ ಕಲ್ಲು ತಾಯಿ ಮೇಲೆ ಬಿದ್ದಿದೆ. ಗಾಯಗೊಂಡು ತಾಯಿ ಜೋರಾಗಿ ಕಿರುಚಿ ಪ್ರಾಹೀನಾಳಾಗಿದ್ದಾಳೆ. ಈ ಚೀರಾಟಕ್ಕೆ ಎಚ್ಚರಗೊಂಡ ಹನುಮಂತರಾಯ, ಮಗನಿಗೆ ನಾಲ್ಕು ಬಾರಿಸಿದ್ದಾರೆ.
ತಂದೆಯನ್ನು ಬಲವಾಗಿ ದೂಡಿದ ಪುತ್ರ, ತಂದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದಾನೆ. ಬಳಿಕ ತಾಯಿಗೆ ಎಚ್ಚರವಾದರೆ ತನ್ನನ್ನು ದಂಡಿಸುತ್ತಾಳೆ ಎಂದು ಹೆದರಿ ತಾಯಿ ಮೇಲೂ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹಗಳನ್ನು ಶೌಚಗೃಹಕ್ಕೆ ಎಳೆದೊಯ್ದು ಬಿಸಾಡಿ ಬೀಗ ಹಾಕಿ ಶೆಡ್ಗೆ ಮರಳಿದ್ದ. ಬೆಳಗ್ಗೆ ನಿದ್ರೆಯಿಂದ ಎಚ್ಚರಗೊಂಡ ಹಿರಿಯ ಸೋದರನಿಗೆ ತಂದೆ&ತಾಯಿ ಕಾಣುತ್ತಿಲ್ಲ ಎಂದಿದ್ದಾನೆ. ಬಳಿಕ ಕೆಲ ಹೊತ್ತು ಹುಡುಕಾಟ ನಡೆಸಿದ ಅವರು, ಪೀಣ್ಯ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಬೀಗ ಹಾಕಿದ್ದ ಶೌಚಗೃಹದ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ದಂಪತಿ ಶವ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರನ್ನೇ ದಾರಿ ತಪ್ಪಿಸಿದ್ದ: ದಂಪತಿ ಕೊಲೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಉತ್ತರ ವಿಭಾಗದ ಡಿಸಿಪಿ ಧಮೇರ್ಂದ್ರ ಮೀನಾ, ಕೃತ್ಯದ ಕುರಿತು ಮಕ್ಕಳ ಕಡೆಯಿಂದ ಮಾಹಿತಿ ಪಡೆದಿದ್ದರು. ಆಗ 2ನೇ ಮಗ ತನಗೇನು ಗೊತ್ತಿಲ್ಲ ಎನ್ನುವಂತೆ ನಟಿಸಿದ್ದ. ಸಾಂದಭಿರ್ಕ ಸಾಕ್ಷಗಳನ್ನು ಮಾಹಿತಿ ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ.