ಜಿಲ್ಲೆ

ಅರಮನೆ ಮೈದಾನದಲ್ಲಿ ಪಯಣ ವಿಂಟೇಜ್ ಕಾರ್ ಪ್ರದರ್ಶನ

ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಆಟೋ ಎಕ್ಸ್‌ಪೋದಲ್ಲಿ ಪಯಣ ಸಂಸ್ಥೆಯು ವಿಂಟೇಜ್ ಕಾರುಗಳ ಪ್ರದರ್ಶನವನ್ನು ಆಯೋಜಿಸಿದೆ.

ಶುಕ್ರವಾರ ಆರಂಭವಾಗಿರುವ ಪ್ರದರ್ಶನವು ಸೋಮವಾರದವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಂಗ್ರಹದಲ್ಲಿರುವ ಅಪರೂಪದ ಪುರಾತನ ಕಾರುಗಳು ಪ್ರದರ್ಶನಕ್ಕಿಡಲಾಗಿದೆ.

ಒಟ್ಟು 10 ವಿಂಟೇಜ್ ಕಾರುಗಳು ಇಲ್ಲಿದ್ದು, ಅದರಲ್ಲಿ ವಿಶೇಷವಾಗಿ ಕರ್ನಾಟಕ ಸರ್ಕಾರದ 1954ರ ಡಾಡ್ಜ್ ಕಿಂಗ್ಸ್‌ವೇ ಕಾರು ಎಲ್ಲರನ್ನು ಸೆಳೆಯುತ್ತಿದೆ. ಕರ್ನಾಟಕ ಸ್ಟೇಟ್ ಕಾರ್ ಎಂದು ಬರೆದಿರುವ ರಾಜ್ಯ ಸರ್ಕಾರದ ಲೋಗೋ ಇರುವ ಈ ಕಾರು ಈಗ ಡಾ.ವೀರೇಂದ್ರ ಹೆಗ್ಗಡೆಯವರ ಸಂಗ್ರಹದಲ್ಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಜ್ಯಕ್ಕೆ ಬಂದಾಗ ಇದೇ ಕಾರಿನಲ್ಲಿ ಸಂಚಾರ ಮಾಡಿರುವ ಹೆಗ್ಗಳಿಕೆ ಇದೆ.

ಇನ್ನುಳಿದಂತೆ 1965ರ ಚೆವರ್‌ಲೆಟ್ ಇಂಪಾಲ್, 1935ರ ಮೋರೀಸ್ 15-6, ಪಿಯೂಗಿಯೊಟ್ 404, ಕ್ಷೇಮವನ ಆಸ್ಟಿನ್ ಬಿಯೇಜ್, ಗ್ಯಾಜ್-69 ಜೀಪ್, ಫಿಯೆಟ್ 501 ಗ್ರೇ ಮತ್ತು ಪಿಂಕ್, ಸ್ಕೋಡಾ ರೋಡ್‌ಸ್ಟರ್, ಚೆವರ್‌ಲೆಟ್ ಬಿಲೈರ್ ಕಾರುಗಳು ಪ್ರದರ್ಶನಕ್ಕಿಡಲಾಗಿದೆ.

ಕಾಲದ ಜೊತೆಗಿನ ಅದ್ಭುತ 'ಪಯಣ'

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಡುವೆ ಚಕ್ರಾಕಾರದ ಒಂದು ವಿಭಿನ್ನ ಕಟ್ಟಡ ದಾರಿಹೋಕರನ್ನು ಸೆಳೆಯುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಸಕ್ತಿಯಿಂದ ನಿರ್ಮಾಣವಾಗಿರುವ ಅಪರೂಪದ ವಸ್ತುಸಂಗ್ರಹಾಲಯವಿದು. ಈ ವಸ್ತು ಸಂಗ್ರಹಾಲಯದ ಹೆಸರು ಪಯಣ. ಇಲ್ಲಿ ವಿಂಟೇಜ್ ಕಾರುಗಳು, ಪ್ರಾಚೀನವಾದ ಅಪರೂಪದ ವಸ್ತುಗಳನ್ನು ಸಂಗ್ರಹಿಸಲಾಗಿದ್ದು, ಆಸಕ್ತರು ಭೇಟಿ ನೀಡಬಹುದು.