ಜಿಲ್ಲೆ

ಕಲಾ ಸಾಧಕರ ಜೀವನಾನುಭವ ಕಿರಿಯರಿಗೆ ಹಂಚಿಕೆ : ಪಟ್ಲ ಸತೀಶ ಶೆಟ್ಟಿ ಹೇಳಿಕೆ

ಸೌಮ್ಯ ಆರ್

ಹಳೆಯಂಗಡಿ: ಹಿರಿಯ ಕಲಾ ಸಾಧಕರ ಜೀವನಾನುಭವದ ಸಾಧನಾಮೃತವನ್ನು ಕಿರಿಯರಿಗೆ ಹಂಚುವ ಮೂಲಕ ಮುಂದಿನ ಪೀಳಿಗೆಯನ್ನು ವಿದ್ವತ್ಪೂರ್ಣವಾಗಿ ಬೆಳೆಸುವುದು ಯಕ್ಷಾಂತರಂಗದ ಮುಖ್ಯ ಉದ್ದೇಶ ಎಂದು ಹಿರಿಯ ಭಾಗವತ ಪಟ್ಲ ಸತೀಶ ಶೆಟ್ಟಿ ಹೇಳಿದರು.

ನಾಗವೃಜ ಕ್ಷೇತ್ರದ ಶಾರಧ್ವತ ಯಜ್ಞಾಂಗಣದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ನಾಗವೃಜ ಕ್ಷೇತ್ರ ಹಾಗೂ ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ಯಕ್ಷಾಂತರಂಗ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಕನ್ನಡ ಉಪನ್ಯಾಸಕ, ಸಂಶೋಧಕ ಡಾ.ಸುಣ್ಣಂಗುಳಿ ಕೃಷ್ಣ ಭಟ್, ಕಲಾವಿದನಿಗಿರಬೇಕಾದ ಭಾಷಾ ಪ್ರೌಢಿಮೆ ಜತೆಗೆ ಪುರಾಣ ಜ್ಞಾನದ ಬಗ್ಗೆ ವಿಚಾರ ಮಂಡನೆ ಮಾಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಯಕ್ಷಗುರು ಶೇಖರ್ ಡಿ.ಶೆಟ್ಟಿಗಾರ್, ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕಾರ್ಯಾಗಾರದ ಸಂಯೋಜಕ ಕೌಶಿಕ್ ರಾವ್ ಪುತ್ತಿಗೆ, ಹಿರಿಯ- ಕಿರಿಯ ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು. ಯಕ್ಷಗಾನ ಶಿಕ್ಷಕ ದೀವಿತ್ ಎಸ್.ಕೆ.ಪೆರಾಡಿ ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ, ಪ್ರಸಂಗ ಪ್ರಾತ್ಯಕ್ಷಿಕೆ

ಸಂಪನ್ಮೂಲ ವ್ಯಕ್ತಿಗಳಾದ ಸುಬ್ರಾಯಹೊಳ್ಳ ಕಾಸರಗೋಡು ಹಾಗೂ ಉಬರಡ್ಕ ಉಮೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳಾದ ವೃಂದಾ ಕೊನ್ನಾರ್, ಪ್ರಜ್ವಲ್ ಶೆಟ್ಟಿ, ಸ್ಕಂದ ಕೊನ್ನಾರ್ ಶಿಬಿರದ ಬಗ್ಗೆ ಅನುಭವ ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶಿಬಿರಾರ್ಥಿಗಳಿಂದ ಕಾರ್ತವೀರ್ಯಾರ್ಜುನ ಪ್ರಸಂಗಾಂತರ್ಗತ ರಾವಣ ಗರ್ವಭಂಗ ಆಖ್ಯಾನ ಹಾಗೂ ಕಿರಾತಾರ್ಜುನ ಪ್ರಸಂಗದ ಪ್ರಾತ್ಯಕ್ಷಿಕೆ ನಡೆಯಿತು.