ಸಂಡೂರು: ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಕೆಯಾದ ಫಾರಂ 57 ವಿಲೇವಾರಿ ಮಾಡಿ ಸಾಗುವಳಿದಾರರಿಗೆ ಪಟ್ಟಾ ವಿತರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಅನಿಲ್ ಕುಮಾರಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಕುಲವಳ್ಳಿ ರೈತರಿಂದ ಸಾಗುವಳಿ ಭೂಮಿಗಾಗಿ ಮತ್ತೆ ಹೋರಾಟ
ರಾಜ್ಯ ಸಹ ಕಾರ್ಯದರ್ಶಿ ವಿ.ಎಸ್.ಶಂಕರ್ ಮಾತನಾಡಿ, ತಾಲೂಕಿನಲ್ಲಿ 2018-19ನೇ ಸಾಲಿನಲ್ಲಿ 13 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ಕಾರದ ಅದೇಶದಂತೆ ಈವರೆಗೆ ಪಟ್ಟಾ ವಿತರಣೆಯಾಗಿಲ್ಲ ಅರ್ಜಿಗಳ ವಿಲೇವಾರಿಗಾಗಿ 40 ದಿನ ಉಪವಾಸ ಸತ್ಯಾಗ್ರಹ ಮಾಡಲಾಯಿತು. ರೈತರಿಗೆ ಪಟ್ಟಾ ವಿತರಿಸಲಾಗುವುದು ಎಂದು ನೀಡಿದ ಭರವಸೆ ಮೇರೆಗೆ ಸತ್ಯಾಗ್ರಹ ಹಿಂಪಡೆಯಲಾಗಿತ್ತು. ಆದರೆ, ಭರವಸೆ ಮಾತ್ರ ಈಡೇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು 2024ರ ಡಿ.25ಕ್ಕೂ ಮುನ್ನ ಸಾಗುವಳಿ ಮಾಡಿದ ರೈತರ ವರದಿಯನ್ನು ಕಳಿಸಿಕೊಡಲು ಹೇಳಿದ್ದರೂ ಈವರೆಗೆ ತಾಲೂಕಿನ ಅರ್ಜಿದಾರ ರೈತರ ಜಮೀನುಗಳಿಗೆ ಅಧಿಕಾರಿಗಳು ಬಂದಿಲ್ಲ ಹಾಗೂ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿಲ್ಲ. ಮುಂದಿನ 15ದಿನಗಳಲ್ಲಿ ಸಾಗುವಳಿ ಮಾಡುವ ರೈತರಿಗೆ ಪಟ್ಟಾ ವಿತರಿಸದಿದ್ದಲ್ಲಿ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಕೆ.ಪರಶುರಾಮ, ಜಿಲ್ಲಾಧ್ಯಕ್ಷ ಕೆ.ದೇವೇಂದ್ರ, ಜಿಲ್ಲಾ ಉಪಾಧ್ಯಕ್ಷ ಡಿ.ಬಸವರಾಜ, ತಾಲೂಕಾಧ್ಯಕ್ಷ ಜಿ.ಶಾಂತಕುಮಾರ್, ಉಪಾಧ್ಯಕ್ಷ ಟಿ.ಎರ‌್ರಿಸ್ವಾಮಿ, ಪದಾಧಿಕಾರಿಗಳಾದ ಭೀಮಪ್ಪ, ಪಿ.ನಾಗಪ್ಪ, ಟಿ.ಅಡಿವೆಪ್ಪ, ಶೇಖಪ್ಪ, ಆನಂದ, ಹೇಮಣ್ಣ, ಪ್ರಾಣೇಶ್, ಅಶೋಕ್ ಕುಮಾರ್, ಟಿ.ವಸಂತ, ವಾಮದೇವ, ಎನ್.ನಾರಾಯಣ ಇತರರಿದ್ದರು.