ಅರಕೇರಾ: ಮಕ್ಕಳ ಆಸಕ್ತಿಯನ್ನು ಗುರುತಿಸುವುದಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಸಿಆರ್‌ಪಿ ಬಿ.ಎಸ್ ಕೇಶಾಪೂರ ಹೇಳಿದರು.
ತಾಲೂಕಿನ ಮಲ್ಲೆದೇವರಗುಡ್ಡ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಇದನ್ನು ಓದಿ: ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ತ ರೂಪಿಸುತ್ತದೆ
ವಿದ್ಯಾರ್ಥಿಗಳು ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆದನಗೌಡ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಶಾಲಾ ಹಂತದ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಭಾಗವಹಿಸಬೇಕು. ಪ್ರತಿಯೊಬ್ಬ ಮಕ್ಕಳಲ್ಲಿ ವೈವಿಧ್ಯಮಯ ಪ್ರತಿಭೆ ಇರುತ್ತದೆ ಎಂದರು. ಮಲ್ಲೆದೇವರಗುಡ್ಡ ವಲಯದ 14 ಶಾಲೆಗಳು ಪ್ರತಿನಿಧಿಸಿದ್ದರು. ವಿದ್ಯಾರ್ಥಿಗಳು ಗಾಯನ, ನೃತ್ಯ, ಏಕಪಾತ್ರಾಭಿನಯ, ನಾಟಕ, ಚಿತ್ರಕಲೆ, ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.