ಆನೇಕಲ್: ಪಂಚಾಯಿತಿ ಅಧಿಕಾರಿಗಳು ಒತ್ತುವರಿ ತೆರವು ವೇಳೆ ಪಕ್ಷಪಾತ ಧೋರಣೆ ತೋರಿದ್ದು, ಬಡವರಿಗೆ ಅನ್ಯಾಯ, ಉಳ್ಳವರಿಗೆ ಅನುಕೂಲ ಎಂಬಂತಾಗಿದೆ. ಇಂಥದ್ದೊಂದು ಬೆಳವಣಿಗೆ ಬೆಂಗಳೂರಿನ ಆನೇಕಲ್ನ ದೊಡ್ಡ ತೋಗೂರು ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಪಂಚಾಯತ್ ಅಧಿಕಾರಿಗಳು ಇಂದು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆಸಿದರು. ಆದರೆ ಈ ಕಾರ್ಯಾಚರಣೆ ವೇಳೆ ಪಕ್ಷಪಾತ ಧೋರಣೆ ತೋರಿರುವುದಕ್ಕೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಬಡವರ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಿ, ಇನ್ನು ಕೆಲವನ್ನು ಹಾಗೇ ಬಿಟ್ಟು ಹೋದ ಪಂಚಾಯತಿ ಅಧಿಕಾರಿಗಳು, ದೊಡ್ಡ ದೊಡ್ಡ ಅಂಗಡಿಗಳವರಿಗೆ ಕಾಲಾವಕಾಶ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ಬಡವರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯನಾ? ಅಧಿಕಾರಿಗಳು ಶ್ರೀಮಂತರ ಕೈಗೊಂಬೆಗಳಾಗಿದ್ದಾರಾ? ಎಂದು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.