ಜಿಲ್ಲೆ

ಅಪಾಯದಲ್ಲಿ ಪರ್ಪಳ ಕಿಂಡಿ ಅಣೆಕಟ್ಟು : 25 ಕುಟುಂಬಕ್ಕೆ ಅಪಾಯ : ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ

ಸೌಮ್ಯ ಆರ್

ಮನೋಹರ್ ಬಳಂಜ ಬೆಳ್ತಂಗಡಿ

ನೆರಿಯ ಗ್ರಾಮದ ಪರ್ಪಳ ಎಂಬಲ್ಲಿ ಅಣಿಯೂರು ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನ ತಡೆಗೋಡೆ ಈ ಬಾರಿಯ ಮಳೆಗೆ ಬಿರುಕು ಬಿಟ್ಟಿದ್ದು, ತಕ್ಷಣ ಸೂಕ್ತ ಕ್ರಮ ವಹಿಸದೇ ಹೋದಲ್ಲಿ 25 ಕುಟುಂಬಗಳು ದ್ವೀಪದಲ್ಲಿ ಸಿಲುಕಲಿವೆ.

ಬೆಳ್ತಂಗಡಿ ಪಟ್ಟಣದಿಂದ 30 ಕಿ.ಮೀ. ದೂರದಲ್ಲಿರುವ ನೆರಿಯ ಪ್ರದೇಶ ಈ ಹಿಂದೆ ಸವಲತ್ತ್ತುಗಳಿಂದ ವಂಚಿತವಾಗಿದ್ದ ಪ್ರದೇಶ. ಆದರೆ ಕೆಲ ವರ್ಷಗಳಿಂದ ಅಗತ್ಯ ಸೌಕರ್ಯ ಪಡೆಯುವ ಮೂಲಕ ಸ್ವಲ್ಪಮಟ್ಟಿಗೆ ನಿಟ್ಟಿಸಿರು ಬಿಟ್ಟಿದ್ದ ಊರು. ರಸ್ತೆ, ಸೇತುವೆ ಸಹಿತ ಕಾಡುಪ್ರಾಣಿಗಳ ತೊಂದರೆಯಿಂದ ನಲುಗುತ್ತಿರುವ ಊರಿಗೆ ಇನ್ನಷ್ಟು ಮೂಲಸೌಕರ್ಯಗಳ ಬೇಡಿಕೆ ಪಟ್ಟಿ ಹಾಗೆ ಉಳಿದಿದೆ. ಈ ಮಧ್ಯೆ ನೇತ್ರಾವತಿಯ ಉಪನದಿ ಅಣಿಯೂರು ಹೊಳೆಗೆ 2014ರಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನ ತಡೆಗೋಡೆ ಈ ಬಾರಿಯ ಮಳೆಗೆ ಕುಸಿದು ಸಂಪರ್ಕ ಅಪಾಯದಲ್ಲಿದೆ.

ಪರ್ಪಳ ಕಿಂಡಿ ಅಣೆಕಟ್ಟು 60 ಮೀ. ಉದ್ದವಿದ್ದು, ದ್ವಿಚಕ್ರ, ತ್ರಿಚಕ್ರ, ಪಿಕಪ್ ವಾಹನ ಸಂಚರಿಸುವಷ್ಟು ಅಗಲವಾಗಿದೆ. ಪರ್ಪಳ, ಕಾಟಾಜೆಯ 25 ಕುಟುಂಬದ 250ರಿಂದ 300 ಮಂದಿ ಇದೇ ಕಿಂಡಿ ಅಣೆಕಟ್ಟನ್ನು ಅವಲಂಬಿಸಿದ್ದಾರೆ. ದಿನ ಬೆಳಗಾದರೆ ಶಾಲಾ ಮಕ್ಕಳು, ಹೈನುಗಾರರು, ಚರ್ಚ್, ದೇವಸ್ಥಾನ ಸಹಿತ ಅಗತ್ಯ ವಸ್ತುಗಳ ಖರೀದಿಗೆ, ಆಸ್ಪತ್ರೆಗೆ ಅಣಿಯೂರು ಪೇಟೆಗೆ ತೆರಳಲು ತೀರ ಹತ್ತಿರದ ಸಂಪರ್ಕವಾಗಿದೆ. ಈ ಬಾರಿಯ ಮಳೆ ರಭಸಕ್ಕೆ ತಡೆಗೋಡೆ ಭಾಗಶಃ ಕುಸಿದು ಆಪತ್ತಿನಲ್ಲಿದೆ. ಮುಂದೆ ಮಳೆಗೆ ಮತ್ತಷ್ಟು ಅನಾಹುತವಾಗುವ ಭೀತಿ ಇರುವುದರಿಂದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಅನುದಾನ ಕೊರತೆ ಹೊಡೆತ: ಈ ಕುರಿತು ಇಲಾಖೆ ಅಧಿಕಾರಿಗಳ ಬಳಿಗೆ ಹಲವು ಬಾರಿ ತೆರಳಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಸ್ಪಂದನೆ ನೀಡಿದರೂ ಅನುದಾನದ ಕೊರತೆ ಬಗ್ಗೆ ಮೇಲಾಧಿಕಾರಿಗಳು ಮೌನ ವಹಿಸುತ್ತಿದ್ದಾರೆ ಎಂಬುದು ಊರವರ ಅಳಲಾಗಿದೆ. ತಕ್ಷಣ ತಡೆಗೋಡೆ ರಕ್ಷಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಪ್ರಸಕ್ತ ನದಿ ನೀರು ಇಳಿಕೆಯಾಗಿದ್ದು, ತಾತ್ಕಾಲಿಕ ವ್ಯವಸ್ಥೆಯಾದರೂ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ದುರಸ್ತಿಗೆ ಗ್ರಾಮಸ್ಥರ ಆಗ್ರಹ

ಕಿಂಡಿ ಅಣೆಕಟ್ಟು ಸದೃಢವಾಗಿದ್ದರೂ ಅದರ ಆಸುಪಾಸು ನಿರ್ಮಿಸಿದ ತಡೆಗೋಡೆ ಕಳೆದ ಮಳೆಗಾಲಕ್ಕೆ ಬಿರುಕು ಮೂಡಿತ್ತು. ಸಣ್ಣ ನೀರಾವರಿ ಇಲಾಖೆಗೆ ಈ ಮಾಹಿತಿ ನೀಡಿ ದುರಸ್ತಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಆದರೆ ಮೊನ್ನೆಯ ಭಾರಿ ಮಳೆಗೆ ತಡೆಗೋಡೆಗೆ ಬಹಳಷ್ಟು ಹಾನಿಯಾಗಿದ್ದು, ಕಲ್ಲುಗಳು ಕುಸಿದಿವೆ. ಈ ಕಿಂಡಿ ಅಣೆಕಟ್ಟು ಪರ್ಪಳ, ಕಾಟಾಜೆಯಿಂದ ಅಣಿಯೂರಿಗೆ ಸಾಗುವ ಮಂದಿಗೆ ತೀರ ಹತ್ತಿರದ ಸಂಪರ್ಕ ಸೇತುವಾಗಿದೆ. ಇಲ್ಲವಾದಲ್ಲಿ ಪರ್ಪಳದಿಂದ ಗಂಡಿಬಾಗಿಲಾಗಿ ಅಣಿಯೂರು ತಲುಪಲು 4 ಕಿ.ಮೀ. ಸುತ್ತಿ ಬಳಸಿ ಬರಬೇಕಿದೆ.

ಪರ್ಪಳ ಕಿಂಡಿ ಅಣೆಕಟ್ಟು ತಡೆಗೋಡೆ ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ಕ್ರಮ ವಹಿಸಿಲ್ಲ. ಈ ಗ್ರಾಮದ ಮಂದಿಗೆ ತೀರ ಹತ್ತಿರದ ಸಂಪರ್ಕವಾಗಿರುವುದರಿಂದ ಇದನ್ನೇ ಆಶ್ರಯಿಸಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆ ತಡೆಗೋಡೆಗೆ ಅನುದಾನ ಒದಗಿಸಬೇಕು. ಬಾಬು ಗೌಡ ಪರ್ಪಳ ನೆರಿಯ ಗ್ರಾಪಂ ಸದಸ್ಯ 2014ರಲ್ಲಿ ರಚನೆಯಾದ ಈ ಕಿಂಡಿ ಅಣೆಕಟ್ಟು 2019ರ ಪ್ರವಾಹ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗಿರಲಿಲ್ಲ. ಈ ಬಾರಿಯ ಮಳೆಗೆ ತಡೆಗೋಡೆ ಬಿರುಕು ಬಿಟ್ಟು ಕುಸಿದಿದೆ. ಶಾಲಾ ಮಕ್ಕಳು, ಹೈನುಗಾರರು ಇದನ್ನೇ ಆಶ್ರಯಿಸಿರುವುದರಿಂದ ತಕ್ಷಣ ತಡೆಗೋಡೆ ಸರಿಪಡಿಸಬೇಕಾಗಿದೆ. ಭವಾನಿ ಲಾನುಭವಿ, ಗ್ರಾಪಂ ಮಾಜಿ ಸದಸ್ಯೆ
ನೆರಿಯ ಗ್ರಾಮದ ಪರ್ಪಳ ಕಿಂಡಿಅಣೆಕಟ್ಟು ಬಿರುಕು ಬಿಟ್ಟಿರುವುದು.