ಸೌತಡ್ಕ ದೇವಳದ ಮುಂಭಾಗ ನಿತ್ಯ ಉಂಟಾಗುತ್ತಿರುವ ಟ್ರಾಫಿಕ್ ಜಾಮ್. 
ಜಿಲ್ಲೆ

ಸೌತಡ್ಕದಲ್ಲಿ ಪಾರ್ಕಿಂಗ್ ಕಿರಿಕಿರಿ : ದ್ವಾರ , ದೇವಳ ಮುಂಭಾಗದಲ್ಲಿ ನಿತ್ಯ ಸಮಸ್ಯೆ : ಬಗೆಹರಿಸಲು ಸ್ಥಳೀಯರ ಒತ್ತಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಧರ್ಮಸ್ಥಳ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಸೌತಡ್ಕ ದ್ವಾರದಲ್ಲಿ ಭಾನುವಾರ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸುಮಾರು 2 ಕಿಲೋ ಮೀಟರ್ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸೌತಡ್ಕ ದ್ವಾರದ ಮುಂಭಾಗ ಮೂರು ಕಡೆಗಳಿಗೆ ಹೋಗುವ ವಾಹನಗಳು ಸಾಲುಗಟ್ಟಿ ನಿಂತಿದ್ದು, ಭಕ್ತರು ಮತ್ತು ಸ್ಥಳೀಯ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಯಿತು. ಜತೆಗೆ ಕೊಕ್ಕಡ, ಶಿಶಿಲ, ಅರಸಿನಮಕ್ಕಿ, ನಿಡ್ಲೆ ಕಡೆಗೆ ಪ್ರಯಾಣಿಸುವ ಸ್ಥಳೀಯ ಪ್ರಯಾಣಿಕರಿಗೂ ಟ್ರಾಫಿಕ್ ಜಾಮ್‌ನಿಂದ ತೊಂದರೆ ಉಂಟಾಯಿತು.

ಸೌತಡ್ಕ ದ್ವಾರದ ಬಳಿ ತಿರುವು ಕಿರಿದಾಗಿದ್ದು, ದೂರದಿಂದ ಬರುವ ದೊಡ್ಡ ಗಾತ್ರದ ಬಸ್, ಟೆಂಪೋ ಟ್ರಾವೆಲರ್‌ಗಳು ತಿರುವು ಪಡೆದುಕೊಳ್ಳಲು ಕಷ್ಟ ಸಾಧ್ಯವಾಗಿದೆ. ಇಲ್ಲೊಂದು ವೃತ್ತ ನಿರ್ಮಿಸಿ, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಆದರೆ ಧರ್ಮಸ್ಥಳ ಸುಬ್ರಹ್ಮಣ್ಯ ಸಂಪರ್ಕ ರಸ್ತೆ ಮೇಲ್ದರ್ಜೆಗೇರಿದ್ದು, ಟೆಂಡರ್ ಹಂತದಲ್ಲಿದೆ. ಸದ್ಯದಲ್ಲಿ ಈ ರಸ್ತೆಯಲ್ಲಿ ಯಾವುದೇ ರೀತಿಯ ಕಾರ್ಯಯೋಜನೆಯನ್ನು ಹಾಕಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕಾರ್ಯ ಕೈಗೊಳ್ಳಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಆಗುವವರೆಗೆ ಶನಿವಾರ ಮತ್ತು ಭಾನುವಾರ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರೊಬ್ಬರನ್ನು ನೇಮಿಸುವಂತೆ ಸ್ಥಳೀಯ ವಾಹನ ಸವಾರರು ಆಗ್ರಹಿಸಿದ್ದಾರೆ.

ಭಾನುವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೌತಡ್ಕಕ್ಕೆ ಆಗಮಿಸಿದ್ದು, ಸೌತಡ್ಕ ಮುಖ್ಯದ್ವಾರ ಪ್ರವೇಶ ಸಂದರ್ಭ ಟ್ರಾಫಿಕ್ ಜಾಮ್ ಉಂಟಾಗಿದೆ. ಕೊಕ್ಕಡದ ರಿಕ್ಷಾ ಚಾಲಕರು ಟ್ರಾಫಿಕ್ ತೆರವುಗೊಳಿಸಲು ಸಹಕರಿಸಿದರು.

ದೇವಳದ ಮುಂಭಾಗದಲ್ಲೂ ವಾಹನ ದಟ್ಟಣೆ

ರಾಜ್ಯದ ಪ್ರಸಿದ್ಧ ಕ್ಷೇತ್ರವಾದ ಬಯಲು ಆಲಯದ ಗಣಪತಿಯ ಸನ್ನಿಧಿಯಲ್ಲಿ ಯಾತ್ರಾರ್ಥಿಗಳ ವಾಹನ ಪಾಕಿರ್ಂಗ್ ಸಮಸ್ಯೆ ನಿತ್ಯ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ದೇವಳದ ಪಕ್ಕದಲ್ಲಿ ಪಾರ್ಕಿಂಗ್‌ಗಾಗಿ ವ್ಯವಸ್ಥೆ ಇದ್ದರೂ ಕೂಡ ವಾಹನವನ್ನು ಸಮರ್ಪಕ ರೀತಿಯಲ್ಲಿ ಪಾರ್ಕಿಂಗ್ ಮಾಡುವಂತೆ ಸಂಬಂಧಿಸಿದವರು ಹೇಳುತ್ತಿಲ್ಲ. ದೂರದ ಊರಿನಿಂದ ಬರುತ್ತಿರುವ ವಾಹನಗಳು ಬೇಕಾಬಿಟ್ಟಿ ಚಲಿಸಿ ಸಂಚಾರ ಸ್ಥಗಿತಗೊಳ್ಳುತ್ತಿದ್ದು ಕೂಡಲೇ ಸರಿಪಡಿಸುವಂತೆ ನಿತ್ಯ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸೌತಡ್ಕ ದೇವಳದ ಮುಂಭಾಗದಲ್ಲಿ ಉಂಟಾದ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ತಕ್ಷಣ ಗಮನಹರಿಸಿ ಸರಿಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಲಾಗುವುದು.- ಕೆ.ವಿ.ಶ್ರೀನಿವಾಸ್ಕಾರ್ಯನಿರ್ವಹಣಾಧಿಕಾರಿ, ಶ್ರೀ ಕ್ಷೇತ್ರ ಸೌತಡ್ಕ https://www.vijayavani.net/matandur-letter