More

    ಶೌಚಗೃಹ ಕೆಲಸ ಅರ್ಧಂಬರ್ಧ – ಖಾಸಗಿ ಬಸ್ ನಿಲ್ದಾಣ ಸೌಲಭ್ಯ ವಂಚಿತ – ಪ್ರಯಾಣಿಕರಿಗೆ ನಿರಂತರ ಸಮಸ್ಯೆ

    ಪುತ್ತೂರು: ಖಾಸಗಿ ಬಸ್ ನಿಲ್ದಾಣದಲ್ಲಿದ್ದ ಶೌಚಗೃಹವನ್ನು ಕೆಡವಿ ಹಾಕಿ ಕೆಲವು ತಿಂಗಳು ಕಳೆದಿದ್ದು, ತ್ವರಿತವಾಗಿ ನಡೆಯಬೇಕಾದ ದುರಸ್ತಿ ಕಾರ್ಯ ಕೆಲವು ತಿಂಗಳಿಂದ ಸ್ಥಗಿತವಾಗಿದೆ. ಅಽಕಾರಿಗಳ ನಿರ್ಲಕ್ಷ್ಯದಿಂದ ನಾಗರಿಕರು ತುರ್ತು ಸಂದರ್ಭದಲ್ಲಿ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.


    ನಗರಸಭೆಗೆ ಸೇರಿದ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲವು ಅಂಗಡಿಗಳಿದ್ದರೆ, ಹೊರ ಭಾಗದಲ್ಲಿ ಅಂಗಡಿಗಳ ಸಮುಚ್ಚಯವಿದೆ. ಇಲ್ಲಿಗೆ ಆಗಮಿಸುವ ಗ್ರಾಹಕರು, ಪ್ರಯಾಣಿಕರು ಖಾಸಗಿ ನಿಲ್ದಾಣದ ಶೌಚಗೃಹವನ್ನೇ ಬಳಕೆ ಮಾಡುತ್ತಿದ್ದರು. ವರ್ಷದಲ್ಲಿ ಹಲವು ಸಲ ಕೆಟ್ಟು ಹೋಗುತ್ತಿದ್ದ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲವು ತಿಂಗಳ ಹಿಂದೆ ಕೆಡವಿ ಹಾಕಲಾಗಿದೆ.
    ಜಲ್ಲಿ ಮರಳು ತಂದು ಬಸ್ ನಿಲ್ದಾಣದ ಒಳಗೆ ದಾಸ್ತಾನು ಮಾಡಲಾಗಿದ್ದು, ಕೆಡವಿ ಹಾಕಿದ ಕೆಲವು ಜಾಗಕ್ಕೆ ಸಿಂಮೆಂಟ್ ಮೆತ್ತಲಾಗಿದೆ. ಪೈಪ್ ಜೋಡಣೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದು, ಬಾಕಿ ಕೆಲಸ ಹಾಗೇ ನನೆಗುದಿಗೆ ಬಿದ್ದಿದೆ. ಮಹಾಲಿಂಗೇಶ್ವರ ದೇವಸ್ಥಾನದ ಜಾತೋತ್ಸವದ ಸಮಯದಲ್ಲಿ ಕಾಣಿಸಿಕೊಂಡ ಕಾರ್ಮಿಕರು ಬಳಿಕ ನಾಪತ್ತೆಯಾಗಿದ್ದಾರೆಂಬ ಮಾಹಿತಿ ಕೇಳಿ ಬರುತ್ತಿದೆ.


    ನಿಲ್ದಾಣಕ್ಕೆ ಬಸ್ ಬರುತ್ತೋ ಇಲ್ಲವೋ ತುರ್ತು ಸಂದರ್ಭದಲ್ಲಿ ಬಳಕೆಯಾಗುತ್ತಿದ್ದ ಶೌಚಗೃಹ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಜನ ಸಂಚಾರವಿಲ್ಲದ ಸಂದರ್ಭದಲ್ಲಿ ರಸ್ತೆಗಳನ್ನೇ ಮಲಿನ ಮಾಡುವ ಕಾರ್ಯಕ್ಕೆ ಮುಂದಾದರೆ, ಮಳೆಗಾಲದಲ್ಲಿ ಮಾರಕ ರೋಗಗಳನ್ನು ಆಹ್ವಾನಿಸುವುದರಲ್ಲಿ ಅನುಮಾನವಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ.

    *ಎಲ್ಲರ ಅನುಕೂಲಕ್ಕೆ ಶೌಚಗೃಹ: ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ ಇ ಟಾಯ್ಲೆಟ್ ಇದ್ದ ಜಾಗದಲ್ಲಿ ಎಲ್ಲ ವಾಹನ ಚಾಲಕರಿಗೆ ಹಾಗೂ ಜನರಿಗೆ ಅನುಕೂಲವಾಗುವಂತೆ ನಗರಸಭೆಯ ವತಿಯಿಂದ ಹೊಸ ಶೌಚಗೃಹದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಅದರ ಕೆಲಸವೂ ಪೂರ್ಣವಾಗದೆ ಹಾಗೇ ಉಳಿದುಕೊಂಡಿದೆ. ಇದರಿಂದ ಆಸುಪಾಸಿನಲ್ಲಿ ಅಗತ್ಯ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


    ಕೆಲವೊಮ್ಮೆ ಬರುವ ಬಸ್
    ಪುತ್ತೂರಿನ ಖಾಸಗಿ ಬಸ್ ನಿಲ್ದಾಣವನ್ನು ಕರ್ನಾಟಕ ನಗರಾಭಿವೃದ್ಧಿ ಹಾಗೂ ಕರಾವಳಿ ಪರಿಸರ ನಿರ್ವಹಣಾ ಯೋಜನೆಯಡಿ ಎ.ಡಿ.ಬಿ. ಸಾಲದ ಮೂಲಕ ನಿರ್ಮಾಣ ಮಾಡಲಾಗಿದ್ದು, ೨೦೦೪ರಲ್ಲಿ ಲೋಕಾರ್ಪಣೆ ಕಾರ್ಯ ನಡೆದಿತ್ತು. ಬಸ್ಸುಗಳು ಮಾತ್ರ ಕೆಲವೊಮ್ಮೆ ಮಾತ್ರ ಆಗಮಿಸುತ್ತಿದ್ದು, ಉಳಿದಂತೆ ರಸ್ತೆಯಲ್ಲೇ ನಿಂತು ಉಳಿದ ವಾಹನಗಳಿಗೆ ಸಮಸ್ಯೆಯನ್ನು ಮಾಡುತ್ತಿರುತ್ತವೆ.


    ನಿರ್ವಹಣೆ ಇಲ್ಲ
    ಖಾಸಗಿ ಬಸ್ ನಿಲ್ದಾಣದಲ್ಲಿರುವ ಕೆಲವು ಕೊಠಡಿಗಳನ್ನು ಅಂಗಡಿ ನಡೆಸಲು ನೀಡಿದ್ದು, ಬಸ್‌ಗಳು ಬರದಿರುವುದರಿಂದ ಯಾವುದೇ ಆದಾಯವೂ ಇಲ್ಲದಂತಾಗಿದೆ. ಇದರ ಜತೆಗೆ ಉಳಿದ ಕೆಲವು ಕೊಠಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡಿದ್ದು, ನಿರ್ವಹಣೆ ಮಾಡುವವರೇ ಇಲ್ಲದಂತಾಗಿದೆ. ಕೋಟಿಗಟ್ಟಲೆ ಸಾಲ ಮಾಡಿ ಕಟ್ಟಿದ ಕಟ್ಟಡ ವ್ಯರ್ಥವಾಗಿ ಹೋಗುತ್ತಿದ್ದರೂ ಕೇಳುವವರಿಲ್ಲದಾಗಿದೆ.


    ಉಪಯೋಗವಾಗದ ಇ ಟಾಯ್ಲೆಟ್:
    ನಗರಸಭೆಯ ವತಿಯಿಂದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಹಿಂದೆ ಇ ಟಾಯ್ಲೆಟ್‌ಗಳನ್ನು ತೆರೆಯುವ ಕಾರ್ಯ ಮಾಡಲಾಗಿತ್ತು. ಆದರೆ ಅದು ಯಾವಾಗಲೂ ನಾದುರಸ್ತಿ ಸ್ಥಿತಿಯಲ್ಲೇ ಇದ್ದುದರಿಂದ ನಿರ್ಮಾಣ ಮಾಡಿಯೂ ಪ್ರಯೋಜನ ಇಲ್ಲದಂತಾಗಿತ್ತು. ಅದಕ್ಕೆ ವಿನಿಯೋಗಿಸಿದ ಲಕ್ಷಾಂತರ ರೂಪಾಯಿ ವ್ಯರ್ಥವಾಗಿ ಹೋಗಿದೆ.

    ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ಶೌಚಗೃಹ ಇಲ್ಲದೆ ಸಮಸ್ಯೆಯಾಗುತ್ತಿದೆ. ಕೆಲವು ತಿಂಗಳಿಂದ ದುರಸ್ತಿತಿಯ ಹೆಸರಿನಲ್ಲಿ ಇದನ್ನು ಮುಚ್ಚಿದ್ದು, ತ್ವರಿತವಾಗಿ ಕೆಲಸವನ್ನೂ ನಿರ್ವಹಿಸುತ್ತಿಲ್ಲ.
    | ನಿಖಿಲ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts