ಸಿಂಧನೂರು: ನಗರದ ಮಾರುಕಟ್ಟೆಯಲ್ಲಿ ಕರ್ಚಿಕಾಯಿ ಮಾರಾಟವಾಗುತ್ತಿದ್ದು, ಔಷಧ ಗುಣಗಳಿರುವುದರಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆದರೆ, ಬೆಲೆ ಕೇಳಿ ಖರೀದಿಗೆ ಹಿಂಜರಿಯುವಂತಾಗಿದೆ.
ಕಳೆದ ಒಂದು ವಾರದಿಂದ ರಸ್ತೆ ಬದಿ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ. ಬಸ್ ನಿಲ್ದಾಣ ಮುಂಭಾಗ, ಕನಕದಾಸ ವೃತ್ತ, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ತಳ್ಳುಗಾಡಿಗಳಲಿ ್ಲಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ. ಒಂದು ಸೇರಿಗೆ 100 ರೂ. ನಿಗದಿ ಪಡಿಸಲಾಗಿದೆ. ಕಳೆದ ವರ್ಷ ಒಂದು ಸೇರಿಗೆ 50 ರೂ. ಇತ್ತು. ಒಂದು ವರ್ಷದಲ್ಲಿ ದರ ದುಪ್ಪಟ್ಟಾಗಿದೆ.
ಮಳೆಯಾಶ್ರಿತ ಕಪ್ಪು ಮಣ್ಣಿನ ಹೊಲಗಳ ಬದುವಿನಲ್ಲಿ ಕರ್ಚಿಕಾಯಿ ಬೆಳೆಯಲಾಗುತ್ತದೆ. ಇದಕ್ಕೆ ಯಾವುದೇ ರಾಸಾಯನಿಕ ಬಳಕೆ ಮಾಡುವುದಿಲ್ಲ. ತಾಲೂಕಿನಲ್ಲಿ ವಿವಿಧೆಡೆಯಿಂದ ಕರ್ಚಿಕಾಯಿ ಆಮದು ಮಾಡಿಕೊಂಡರೆ, ಇನ್ನೂ ಕೆಲ ಮಹಿಳೆಯರು ಸ್ಥಳೀಯವಾಗಿ ಸಿಗುವ ಕರ್ಚಿಕಾಯಿಯನ್ನು ಬೆಳಗ್ಗೆ ಹರಿದುಕೊಂಡು ಬಂದು ನಗರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಬಪ್ಪೂರ ಗ್ರಾಮದ ಮಹಿಳೆಯರು ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲ ವೃದ್ಧರು ಕೂಡ ಸ್ಥಳೀಯ ಕನಕದಾಸ ವೃತ್ತದಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ನಗರದ ವಿವಿಧ ಕಡೆ ಕರ್ಚಿಕಾಯಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಕರ್ಚಿಕಾಯಿ ಬಿಡಿಸಲು ಮಹಿಳೆಯರಿಗೆ ಕೂಲಿ ಸಿಗುತ್ತಿದೆ. ಇದರಿಂದ ಉಪಜೀವನ ನಡೆಯಲು ಸಹಕಾರಿಯಾಗಿದೆ.