ಬೆಂಗಳೂರು: ನಿಮ್ಮ ಮಕ್ಕಳು ಅಶ್ಲೀಲ ವೆಬ್ಸೈಟ್ನಲ್ಲಿ ವಿಡಿಯೋ ವೀಕ್ಷಿಸುತ್ತಿದ್ದಾರೆ ಮತ್ತು ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಪಾಲಕರಿಗೆ ಬ್ಲಾಕ್ವೆುೕಲ್ ಮಾಡಿ ಸೈಬರ್ ಕಳ್ಳರು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ನಾಗರಬಾವಿ ರಿಂಗ್ ರಸ್ತೆ ಸಮೀಪ ನೆಲೆಸಿರುವ 42 ವರ್ಷದ ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಸಿಬಿಐ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಅವರ ವಾಟ್ಸ್ಆಪ್ಗೆ ನಕಲಿ ನೋಟಿಸ್ ಜಾರಿ ಮಾಡಿದ್ದ. ನಿಮ್ಮ ಪುತ್ರ ಅಶ್ಲೀಲ ವೆಬ್ಸೈಟ್ನಲ್ಲಿ ಸದಾಕಾಲ ಅಶ್ಲೀಲ ವಿಡಿಯೋ ನೋಡುತ್ತಿದ್ದಾನೆ. ಜತೆಗೆ ವಿಡಿಯೋ ಅಪ್ಲೋಡ್ ಮಾಡಿದ್ದು, ನಮಗೆ ಇಂಟರ್ಪೋಲ್ನಿಂದ ವರದಿ ಬಂದಿದೆ. ಎಫ್ಐಆರ್ ದಾಖಲಿಸಿಕೊಂಡಿದ್ದು, ಬಂಧನ ವಾರಂಟ್ ಜಾರಿಯಾಗಿದೆ. ಕೂಡಲೇ ನಿಮ್ಮ ಪುತ್ರನ ಬಂಧಿಸಬೇಕಾಗಿದೆ ಎಂದು ಹೆದರಿಸಿದ್ದ.
ವಾಟ್ಸ್ಆಪ್ಗೆ ಬಂದ ಲೆಟರ್ ನೋಡಿದ ತಾಯಿ, ಗಾಬರಿಯಾಗಿದ್ದಳು. ಅಷ್ಟೊತ್ತಿಗೆ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಮಗನನ್ನು ವರ್ಚುವಲ್ ಮೂಲಕ ವಿಚಾರಣೆ ಮಾಡಬೇಕಾಗಿದೆ. ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಿಂದ ನಿಮ್ಮ ಪುತ್ರನ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಕೇಸ್ನಲ್ಲಿ ರಕ್ಷಣೆ ಮಾಡಬೇಕಾದರೆ ಹಣ ಕೊಡಬೇಕು ಎಂದು ತಾಯಿಗೆ ಹೇಳಿದ್ದ. ಅದಕ್ಕೆ ಒಪ್ಪಿದ ತಾಯಿ, ತಮ್ಮ ಸಂಬಂಧಿಕರಿಗೆ ನೋಟಿಸ್ ತೋರಿಸಿ ಹಣ ಕೇಳಲು ಪ್ರಯತ್ನಿಸಿದ್ದಳು. ಆಗ ಅವರ ಸಂಬಂಧಿ ಇದೊಂದು ನಕಲಿ ನೋಟಿಸ್ ಆಗಿದ್ದು, ಸೈಬರ್ ವಂಚಕರ ಜಾಲ ಎಂದು ಧೈರ್ಯ ತುಂಬಿದ್ದರು. ನಂತರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ವಾರಂಟ್: ದೂರುದಾರ ತಾಯಿಗೆ ಕಳುಹಿಸಿರುವ ನೋಟಿಸ್ನಲ್ಲಿ ಸಿಬಿಐ, ಇಡಿ, ಇಂಟರ್ಪೋಲ್ ಸೇರಿ ಕೇಂದ್ರ ತನಿಖಾ ಸಂಸ್ಥೆಗಳ ಸೀಲ್ಗಳನ್ನು ಬಳಸಿ ನಕಲಿ ನೋಟಿಸ್ ತಯಾರು ಮಾಡಿದ್ದಾರೆ. ಗ್ರಾಫಿಕ್ ಬಳಸಿ ನಕಲಿ ನೋಟಿಸ್ ತಯಾರಿಸಿ ಅಮಾಯಕರ ವಾಟ್ಸ್ಆಪ್ಗೆ ಕಳುಹಿಸಿ ಬ್ಲಾಕ್ವೆುೕಲ್ ಮಾಡಿ ಹಣ ವಸೂಲಿಗೆ ಯತ್ನಿಸುತ್ತಾರೆ. ಸಾರ್ವಜನಿಕರು ವಂಚಕರಿಗೆ ಹೆದರದೆ ಪೊಲೀಸರಿಗೆ ದೂರು ಕೊಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.