ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಪ್ರಭಾವಿಗಳಿಂದ ಅತಿಕ್ರಮಣಕ್ಕೆ ಒಳಗಾಗಿದ್ದ ಗ್ರಾಪಂಗೆ ಸೇರಿದ ನಿವೇಶನವನ್ನು ಬೆಳ್ತಂಗಡಿ ತಹಸೀಲ್ದಾರ್ ನೇತೃತ್ವದಲ್ಲಿ ಭೂಮಾಪಕರಿಂದ ಅಳತೆ ಮಾಡಿಸಿ ಪಂಚಾಯಿತಿ ಸ್ವಾಧೀನಕ್ಕೆ ಪಡೆದ ಘಟನೆ ತಣ್ಣೀರುಪಂತ ಗ್ರಾಮದಲ್ಲಿ ನಡೆದಿದೆ.
ಕಳೆದ ಆರು ವರ್ಷಗಳ ಹಿಂದೆ ಗ್ರಾಮದ ಕಲ್ಲೇರಿ ಪೇಟೆಯ ಹೃದಯ ಭಾಗದಲ್ಲಿ ಗ್ರಾಮಾಂತರ ಪ್ರದೇಶದ ರೈತಾಪಿ ವರ್ಗದ ಜನರಿಗಾಗಿ ಕೃಷಿ ಮಾರುಕಟ್ಟೆಗೆಂದು 48 ಸೆಂಟ್ಸ್ ಸರ್ಕಾರಿ ಭೂಮಿಯನ್ನು ಕಾಯ್ದಿರಿಸಲಾಗಿತ್ತು. ಆದರೆ ಈ ಭೂಮಿ ಖಾಸಗಿಯವರಿಂದ ಅತಿಕ್ರಮಣಕ್ಕೆ ಒಳಗಾಗಿತ್ತು. ಅತಿಕ್ರಮಿತ ಭೂ ಸ್ವಾದೀನ ಸಲುವಾಗಿ ಗ್ರಾಪಂ ಹೈಕೋರ್ಟ್ ಮೊರೆ ಹೋಗಿತ್ತು, ವಿಚಾರಣೆ ನಡೆಸಿದ ಹೈಕೋರ್ಟ್, ಖಾಸಗಿಯವರ ಸ್ವಾದೀನದಲ್ಲಿರುವ ಭೂಮಿಯನ್ನು ಗ್ರಾಪಂಗೆ ಬಿಟ್ಟುಕೊಡುವಂತೆ ಆದೇಶಿಸಿತ್ತು.
ಅದರಂತೆ ಬೆಳ್ತಂಗಡಿ ತಾಲೂಕು ದಂಡಾಧಿಕಾರಿ ಪೃಥ್ವಿ ಸಾನಿಕಂ ಉಪಸ್ಥಿತಿಯಲ್ಲಿ ಭೂಮಾಪಕರು ಭೂಮಿ ಅಳತೆ ಮಾಡಿಸಿದಾಗ 20 ಅಡಕೆ ಸಸಿ ನೆಡಲಾದ ಕೃಷಿ ಭೂಮಿ ಹಾಗೂ ಖಾಸಗಿಯವರ ಸ್ವಾಧೀನವಿದ್ದ ಆರು ಅಂಗಡಿ ಕೋಣೆಗಳನ್ನು ಒಳಗೊಂಡ ವಾಣಿಜ್ಯ ಕಟ್ಟಡ ಸಹಿತ ಎಲ್ಲ 48 ಸೆಂಟ್ಸ್ ಭೂಮಿಯ ಅತಿಕ್ರಮ ತೆರವುಗೊಳಿಸಿ ಗ್ರಾಮ ಪಂಚಾಯಿತಿ ಸ್ವಾಧೀನಕ್ಕೆ ಒಳಪಡಿಸಲಾಯಿತು.
ಗ್ರಾಂ.ಪಂ.ಅಧ್ಯಕ್ಷ ಹೇಮಾವತಿ, ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯ ವಿಕ್ರಮ ಕಲ್ಲಾಪು, ಸದಾನಂದ ಶೆಟ್ಟಿ ಮಡಪ್ಪಾಡಿ, ಡಿ.ಕೆ.ಅಯೂಬ್, ಲೀಲಾವತಿ, ಸಾಮ್ರಾಟ್, ಗ್ರಾಪಂ ಮಾಜಿ ಸದಸ್ಯ ಕೆ.ಎಸ್.ಅಬ್ದುಲ್ಲಾ, ಕಂದಾಯ ನಿರೀಕ್ಷಕರಾದ ಪಾವಡಪ್ಪ ದೊಡ್ಡಮನೆ. ಗ್ರಾಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ಶ್ರವಣ್‌ಕುಮಾರ್, ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು.