ವಿಜಯ ಸಂಕೇಶ್ವರ  
ಜಿಲ್ಲೆ

ಡಾ.ವಿಜಯ ಸಂಕೇಶ್ವರಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಕೋಟ

ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ‘ಸದ್ಭಾವನಾ-2024’ ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಈ ಬಾರಿಯ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ನ.16 ರಂದು ಕೋಟದ ಗಾಂಧಿ ಮೈದಾನದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರತಿ ವರ್ಷ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಕನ್ನಡ ನಾಡು ಕಂಡ ಶ್ರೇಷ್ಠ ಉದ್ಯಮಿ ಡಾ.ವಿಜಯ ಸಂಕೇಶ್ವರ ಅವರಿಗೆ ಗಣ್ಯರ ಸಮ್ಮುಖ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ 20 ಸಾವಿರ ರೂ. ಮೌಲ್ಯದ ಬೆಳ್ಳಿ ಫಲಕ ಮತ್ತು ನಗದು ಒಳಗೊಂಡಿದೆ.

ಇದೇ ವೇಳೆ, ಸ್ಥಳೀಯ ಸಾಧಕರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಗುತ್ತಿದೆ. ವಿಶೇಷ ಪುರಸ್ಕಾರಕ್ಕೆ ಪರಿಸರಸ್ನೇಹಿ ಸಂಘಟನೆ ಸ್ವಚ್ಛ ಬ್ರಿಗೇಡ್ ಕಾರ್ಕಳ ತಂಡವನ್ನು ಆಯ್ಕೆ ಮಾಡಲಾಗಿದೆ. ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿವೇತನ, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಕೂಡ ವೇದಿಕೆಯಲ್ಲಿ ನಡೆಯಲಿವೆ. ವಿಶೇಷ ಆಹ್ವಾನಿತರಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ದೊಡ್ಡಣ್ಣ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಮಯೂರಿ ನೃತ್ಯ ತಂಡ ಕುಂಭಾಶಿ, ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಅವಿಭಜಿತ ಜಿಲ್ಲೆಗಳ ಪ್ರಸಿದ್ಧ ನಾಟಕ ತಂಡ ಪಿಂಗಾರ್ ಕಲಾವಿದರ್ ಬಿದ್ರೆ ಅವರ ಹಾಸ್ಯಮಯ ‘ಕದಂಬ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಆಚಾರ್ ಹಾಗೂ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ತಿಳಿಸಿದ್ದಾರೆ.