ಹೇಮನಾಥ್ ಪಡುಬಿದ್ರಿ
ದಿನನಿತ್ಯ ಸಾವಿರಾರು ವಾಹನ ಒಡಾಡುತ್ತಿರುವ ಉಡುಪಿ ಮತ್ತು ದ.ಕ. ಜಿಲ್ಲೆಯ ಪ್ರಮುಖ ಸಂಪರ್ಕಕೊಂಡಿ ಪಲಿಮಾರು ಸೇತುವೆ ಶಿಥಿಲಗೊಂಡು ಭಾರಿ ವಾಹನ ಸಂಚಾರ ನಿಷೇಧದಿಂದ ಸೇತುವೆ ಗಡಿಭಾಗದ ಗ್ರಾಮಗಳ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಮಂಗಳೂರು ತಾಲೂಕು ದಾಮಸ್‌ಕಟ್ಟೆ, ಬಳ್ಕುಂಜೆ ಮೂಲಕ ಉಡುಪಿ ಜಿಲ್ಲೆ ಪಲಿಮಾರು ಗ್ರಾಮ ಮೂಲಕ ಹಾದು ಕಾರ್ಕಳ, ಶಿರ್ವ ರಾಜ್ಯ ಹೆದ್ದಾರಿಗಳ ಸಂಪರ್ಕಕ್ಕೆ ಅನುಕೂಲಕರವಾಗಿ ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ 1970ರಲ್ಲಿ ಸೇತುವೆ ನಿರ್ಮಿಸಲಾಗಿತ್ತು. 5 ಅಂಕಣಗಳೊಂದಿಗೆ 107.50 ಮೀ.ಉದ್ದ ಹಾಗೂ 7.50 ಮೀ. ಸಂಚಾರ ಪಥವನ್ನೊಂದಿರುವ 54 ವರ್ಷ ಹಳೆಯದಾದ ಸೇತುವೆ ಇದೀಗ ಶಿಥಿಲವಾಗಿದೆ. ಮಂಗಳೂರು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಈ ಸೇತುವೆ ಶಿಥಿಲವಾಗಿರುವ ಬಗ್ಗೆ ಇಲಾಖೆ ನೀಡಿದ ವರದಿಯಂತೆ ಜೂನ್ 29ರಿಂದ ಭಾರಿ ವಾಹನ ಓಡಾಟ ನಿಷೇಧಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಪಲಿಮಾರು ಸೇತುವೆ ಮೂಲಕ ಚಲಿಸುತ್ತಿದ್ದ ಬಸ್ ಪಲಿಮಾರು ಚರ್ಚ್ ರಸ್ತೆಯಲ್ಲಿ ಸಂಚರಿಸಿ ಇನ್ನಾ ಮುಂಡ್ಕೂರು ರಸ್ತೆಯಲ್ಲಿ ಸಾಗಿ ಮಂಗಳೂರು- ಆತ್ರಾಡಿ ರಾಜ್ಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಸಾಗಬೇಕಿದೆ. ಪಲಿಮಾರನತ್ತ ಆಗಮಿಸುವ ಬಸ್‌ಗಳು ಇದೇ ಮಾರ್ಗದಲ್ಲಿ ವಾಪಸ್ ಬರಬೇಕಾಗಿದೆ. ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುವ ಪಲಿಮಾರು ಚರ್ಚ್ ರಸ್ತೆ ಅಗಲ ಕಿರಿದಾಗಿದ್ದು, ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ಅಪಾಯಕಾರಿಯಾಗುತ್ತಿದೆ.
ಹಲವಾರು ಬಸ್‌ಗಳು ಸಂಚರಿಸುವ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟ ನಿಷೇಧದಿಂದ ಬಸನ್ನೇ ಅವಲಂಬಿತ ಕರ್ನಿರೆ, ಬಳ್ಕುಂಜೆ, ಪಲಿಮಾರು, ಅಡ್ವೆ ನಂದಿಕೂರು ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಅದರಲ್ಲೂ ಬಸ್ಸನ್ನೇ ಅವಲಂಬಿತ ಶಾಲಾ ವಿದ್ಯಾಥಿಗಳು ಇದೀಗ ಸುತ್ತು ಬಳಸಿ ಬಸ್ ಅಥವಾ ಆಟೋ ಮೂಲಕ ಶಾಲೆಗಳಿಗೆ ತೆರಳುವಂತಾಗಿದೆ. ಶಾಲಾ ವಾಹನಗಳಲ್ಲಿ ತೆರಳುವ ಈ ಪರಿಸರದ ಮಕ್ಕಳು ಸೇತುವೆ ದಾಟಲು ಬೇರೊಂದು ವಾಹನ ಅವಲಂಬಿಸುವಂತಾಗಿದೆ.
ಸೇತುವೆ ಅಡಿ ಭಾಗದ ಬೀಮ್‌ಗಳಲ್ಲಿ ಕಾಂಕ್ರೀಟ್ ಕಿತ್ತುಹೋಗಿ ಶಿಥಿಲಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹೊಸ ಸೇತುವೆ ನಿರ್ಮಾಣ ಬಗ್ಗೆ ಸದ್ಯ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲ. ಭಾರಿ ವಾಹನಗಳ ಸಂಚರಿಸದಂತೆ ಸೇತುವೆ ಎರಡೂ ತುದಿಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ವಾರದೊಳಗೆ ಮುಂಜಾಗ್ರತಾ ಫಲಕ ಅಳವಡಿಸಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.-ಶ್ರೀಧರ್ ತಾಳಿಕಟ್ಟೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್
ಬಸ್‌ನಲ್ಲಿ ಶಾಲೆಗೆ ಆಗಮಿಸುವ ಹಲವು ಮಕ್ಕಳಿದ್ದು, ಅವರಿಗೆ ತೊಂದರೆಯಾಗಿದೆ. ಅದರಲ್ಲಿ ಕೆಲ ಮಕ್ಕಳನ್ನು ಪಾಲಕರೇ ವಾಹನಗಳಲ್ಲಿ ಶಾಲೆಗೆ ತಂದು ಬಿಡುತ್ತಿದ್ದಾರೆ. ಇನ್ನು ಕೆಲ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದು ಅದರಲ್ಲಿಯೇ ಕಳುಹಿಸುವ ಕೆಲಸ ಮಾಡುತ್ತಿದ್ದೇವೆ.-ಗ್ರೆಟ್ಟಾ ಮೊರಾಸ್, ಪಲಿಮಾರು ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲೆ
ಹಲವು ವರ್ಷಗಳ ಹಿಂದೆಯೇ ಸೇತುವೆ ಶಿಥಿಲವಾಗಿರುವ ಬಗ್ಗೆ ದೂರಿದ್ದರೂ ಎಚ್ಚೆತ್ತುಕೊಳ್ಳದ ಇಲಾಖೆ ಇದೀಗ ಭಾರಿ ವಾಹನಗಳ ನಿರ್ಬಂಧಗೊಳಿಸಿರುವುದರಿಂದ ಆಸುಪಾಸಿನ ಗ್ರಾಮಗಳಿಗೆ ತೊಂದರೆಯಾಗಿದೆ. ಸೇತುವೆ ದುರಸ್ತಿ ಅಥವಾ ಹೊಸ ಸೇತುವೆ ನಿರ್ಮಾಣ ಎಷ್ಟು ಕಾಲಾವಧಿಯಲ್ಲಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆ ನೀಡಬೇಕು.-ದಿನೇಶ್ ಕೋಟ್ಯಾನ್ ಪಲಿಮಾರು ತಾಪಂ ಮಾಜಿ ಸದಸ್ಯ