ಬೆಂಗಳೂರು: ಪೈಂಟಿಂಗ್ ಕೆಲಸ ಮಾಡುವಾಗ ಹಗ್ಗ ತುಂಡಾಗಿ ನಾಲ್ಕನೆ ಮಹಡಿಯಿಂದ ಬಿದ್ದು ಪೈಂಟರ್ ಸಾವನ್ನಪ್ಪಿರುವ ಪ್ರಕರಣ ಜೆ.ಪಿ ನಗರ ೫ನೇ ಹಂತದ ೨೪ ನೇ ಮುಖ್ಯರಸ್ತೆಯ ಮಹಾವೀರ ಪ್ಯಾಲೇಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಮೃತ ದುರ್ದೈವಿ ಹೆಸರು ನರಸಿಂಹಯ್ಯ(55) ಎಂದು ತಿಳಿದು ಬಂದಿದ್ದು ಪೈಂಟಿಂಗ್ ಕೆಲಸದ ವೇಳೆ ಸೂಕ್ತ ಸುರಕ್ಷತಾ ಕ್ರಮಗಳನ್ನು ವಹಿಸಿರಲಿಲ್ಲ ಎಂದು ವರದಿಯಾಗಿದೆ.
ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸದೆ ಶುಕ್ರವಾರ 9:00 ಗಂಟೆಯ ಸುಮಾರಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಹಗ್ಗ ತುಂಡಾದ ಪರಿಣಾಮ ಪೈಂಟರ್ ನರಸಿಂಹ ನೆಲಕ್ಕೆ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾದುದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ನರಸಿಂಹ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗವನ್ನು ಮತ್ತೊಬ್ಬ ಪೈಂಟರ್ 4ನೇ ಮಹಡಿಯ ಮೇಲಿದ್ದ ಹಿಡಿದುಕೊಂಡಿದ್ದ.
ಈ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.