ಬೆಂಗಳೂರು: ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಹಾಗೂ ಆತನ 22 ಬೆಂಬಲಿಗರನ್ನು ಜಗಜೀವನ್ರಾಮ್ ನಗರ ಪೊಲೀಸರು 3 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಸೋಮವಾರ ವಿಡಿಯೋ ಗೋಷ್ಠಿ ಮೂಲಕ ಇಮ್ರಾನ್ ಪಾಷಾ ಹಾಗೂ ಇತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು ಮತ್ತೆ ತಮ್ಮ ವಶಕ್ಕೆ ನೀಡುವಂತೆ ಮನವಿಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ 3 ದಿನ ಆರೋಪಿಗಳನ್ನು ಪೊಲೀಸರ ವಶಕ್ಕೆನೀಡಿದ್ದಾರೆ.
ಆರೋಪಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಮ್ರಾನ್ ಪಾಷಾಗೆ ಈ ಹಿಂದೆಯೇ ಕರೊನಾ ನೆಗೆಟಿವ್ ಬಂದಿದ್ದು, ಪೊಲೀಸ್ ವಶದಲ್ಲಿರುವ ಆತನ ಬೆಂಬಲಿಗರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಕರೊನಾ ಪಾಸಿಟಿವ್ ಇದ್ದರೆ ಆಸ್ಪತ್ರೆಗೆ ದಾಖಲಿಸಲಾಗುವುದು, ನೆಗೆಟಿವ್ ಬಂದರೆ ಸೂಕ್ತ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜಡ್ಜ್ಗಳ ವಸತಿಗೃಹದಲ್ಲಿ ಕಳವು
ಎಲ್ಲ ಆಯಾಮಗಳಲ್ಲೂ ತನಿಖೆ: ಕರೊನಾ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಮೆರವಣಿಗೆ ಆಯೋಜಿಸಿರುವುದು ಯಾರು?, ಪಾಷಾ ಅವರೇ ಬೆಂಬಲಿಗರಿಗೆ ಸೂಚಿಸಿದ್ದರೆ ಎಂಬುದು ಸೇರಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.