ಜಿಲ್ಲೆ

18ರಿಂದ ಪದಾಳ ದೇವಳ ಬ್ರಹ್ಮಕಲಶೋತ್ಸವ

Avinash R

ಉಪ್ಪಿನಂಗಡಿ: ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಡಿ.18ರಿಂದ 23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ದೇವರಿಗೆ ಬೆಳ್ಳಿ ಕವಚ, ಸ್ವರ್ಣ ನೇತ್ರ ಹಾಗೂ ದೈವಗಳಿಗೆ ಪಲ್ಲಕ್ಕಿ, ಮೊಗಗಳ ಸಮರ್ಪಣಾ ಸೇವೆಗಳು ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿದೆ. 18ರಂದು ಬೆಳಗ್ಗೆ 10ಕ್ಕೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಹಸಿರು ಹೊರೆ ಕಾಣಿಕೆ ಸಮರ್ಪಣೆ ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬಳಿಕ ವೈದಿಕ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಭಜನಾ ಸೇವೆಗಳು ನಡೆಯಲಿವೆ. ಇದರೊಂದಿಗೆ ಯಕ್ಷಗಾನ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ, ಭಕ್ತಿ ರಸಮಂಜರಿ, ಹರಿಕಥಾ ಸತ್ಸಂಗ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳು ನಡೆಯಲಿವೆ.

ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ಟ ಮಾಹಿತಿ ನೀಡಿದರು. ಆಡಳಿತ ಸಮಿತಿ ಉಪಾಧ್ಯಕ್ಷ ಸುರೇಶ್ ಅತ್ರೆಮಜಲು , ಖಜಾಂಚಿ ರಾಮಚಂದ್ರ ಮಣಿಯಾಣಿ, ಹೊರೆ ಕಾಣಿಕೆ ಸಮಿತಿ ಸಂಚಾಲಕ ಜಯಂತ ಪೊರೋಳಿ ,ಆಡಳಿತ ಮಂಡಳಿ ಸದಸ್ಯರಾದ ಸದಾನಂದ ಶೆಟ್ಟಿ ಕಿಂಡೋವು, ನವೀನ್ ಕುಮಾರ್ ಕಲ್ಯಾಟೆ, ಕಾರ್ಯಕಾರಿ ಸಮಿತಿ ಸದಸ್ಯ ಗಿರೀಶ ಆರ್ತಿಲ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಜಯಗೋವಿಂದ ಶರ್ಮಾ ಪದಾಳ, ಜತೆ ಕಾರ್ಯದರ್ಶಿ ಲಕ್ಷ್ಮಣ ಗೌಡ ನೆಡ್ಚಿಲು, ಆರ್ಥಿಕ ಸಮಿತಿ ಸಂಚಾಲಕ ಧರ್ನಪ್ಪ ನಾಯ್ಕ ಬೊಳ್ಳಾವು, ಅಲಂಕಾರ ಸಮಿತಿ ಸಂಚಾಲಕ ಪ್ರಸನ್ನ ಪೆರಿಯಡ್ಕ, ಚಪ್ಪರ ಸಮಿತಿಯ ವಸಂತ ನಾಯ್ಕ ಬೊಳ್ಳಾವು ಉಪಸ್ಥಿತರಿದ್ದರು.