ಜಿಲ್ಲೆ

ಒಕ್ಕಲಿಗರ ಸಂಘದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಪಿ.ಎನ್. ರವೀಂದ್ರ ನೇಮಕ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಚುನಾವಣಾಧಿಕಾರಿ ಆಗಿ ಐಎಎಸ್​ ಅಧಿಕಾರಿ ಪಿ.ಎನ್​. ರವೀಂದ್ರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣಾಧಿಕಾರಿಯನ್ನು ನೇಮಕ ಮಾಡುವಂತೆ ಸಂಘದ ಆಡಳಿತಾಧಿಕಾರಿ ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದಿದ್ದರು. ನಿಬಂಧಕರು ಸರ್ಕಾರಕ್ಕೆ ಪ್ರಸ್ತವಾನೆಯನ್ನು ಕಳುಹಿಸಿದ್ದರು.

ರಾಜ್ಯ ಒಕ್ಕಲಿಗರ ಸಂಘಕ್ಕೆ 3 ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿನ್ನೆಯಷ್ಟೇ ನಿರ್ದೇಶನ ನೀಡಿತ್ತು. ಸಂಘಕ್ಕೆ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಚಿತ್ರ ನಿರ್ಮಾಪಕ ಕೃಷ್ಣೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ಈ ಆದೇಶ ಮಾಡಿತ್ತು.

ಅರ್ಜಿದಾರರ ಪರ ವಕೀಲ ಧರ್ಮಪಾಲ ಗೌಡ ವಾದ ಮಂಡಿಸಿ, ಸಂಘದ ಪದಾಧಿಕಾರಿಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಹಿಂದಿನ ಕಾರ್ಯಕಾರಿ ಸಮಿತಿಯನ್ನು ಪದಚ್ಯುತಿಗೊಳಿಸಲಾಗಿತ್ತು. ಬಳಿಕ ಸಂಘದ ಕೆಲಸ-ಕಾರ್ಯಗಳ ನಿರ್ವಹಣೆಗೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರಲಿಂಗೇಗೌಡ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಕಾನೂನು ಪ್ರಕಾರ ಆಡಳಿತಾಧಿಕಾರಿ ನೇಮಕಗೊಂಡ 6 ತಿಂಗಳ ನಂತರ ಅವರ ಅವಧಿ ಹಾಗೂ ಅಧಿಕಾರ ಪೂರ್ಣಗೊಳ್ಳುತ್ತದೆ. ಅಷ್ಟರೊಳಗೆ ಚುನಾವಣೆ ನಡೆಸಬೇಕಾಗುತ್ತದೆ. ಆದರೆ, ಕಳೆದ ಎರಡೂವರೆ ವರ್ಷಗಳಿಂದಲೂ ಆಡಳಿತಾಧಿಕಾರಿಯ ಅವಧಿ ವಿಸ್ತರಿಸಿಕೊಂಡು ಬರಲಾಗುತ್ತಿದೆಯೇ ಹೊರತು, ಸಂಘಕ್ಕೆ ಚುನಾವಣೆ ನಡೆಸುತ್ತಿಲ್ಲ. ಆದ್ದರಿಂದ, ಕೂಡಲೇ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ