ಬೀದಿನಾಯಿ ಗುಂಪು  
ಜಿಲ್ಲೆ

ಮಿತಿಮೀರಿದ ಬೀದಿನಾಯಿ ಹಾವಳಿ

ಇಂದಿರಾ ಎನ್ ಕೆ

ಹೇಮನಾಥ್ ಪಡುಬಿದ್ರಿ

ಕಾಪು ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಅನುದಾನ ಕ್ರೋಢಿಕರಣವೇ ಸ್ಥಳೀಯಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಪ್ರತೀ ಗ್ರಾಮ ಪಂಚಾಯಿತಿಗಳಲ್ಲೂ ಕ್ರಿಯಾಯೋಜನೆಯಲ್ಲಿ ನಿರ್ದಿಷ್ಟ ಮೊತ್ತವನ್ನು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದೇ ಕಾಯ್ದಿರಿಸಲಾಗುತ್ತದೆ. ಏಜೆನ್ಸಿಗಳು ನಾಯಿಯೊಂದರ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ 1,600ರಿಂದ 2,000 ರೂ. ದರ ಪಡೆಯುವುದರಿಂದ ಅನುದಾನ ಕೊರತೆಯಾಗುತ್ತಿದೆ. ಏಜೆನ್ಸಿಯ ಷರತ್ತುಗಳೂ ಗ್ರಾಪಂಗಳಿಗೆ ದುಬಾರಿಯಾಗುತ್ತಿವೆ.

ಈ ಬಗ್ಗೆ ಕಳೆದ ಬಾರಿ ದೃಢ ನಿಲುವು ತೆಗೆದುಕೊಂಡ ಕಾಪು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನೇತೃತ್ವದಲ್ಲಿ ಎಲ್ಲ ಗ್ರಾಪಂ ಹಾಗೂ ಕಾಪು ಪುರಸಭೆ ಅನುದಾನ ಹೊಂದಾಣಿಕೆ ಮಾಡಿಕೊಂಡು ಕಳೆದ ವರ್ಷ ಬೃಹತ್ ಮಟ್ಟದ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸಾ ಕಾರ್ಯ ಯಶಸ್ವಿಯಾಗಿ ನಡೆಸಲಾಗಿತ್ತು. ಸ್ಥಳೀಯಾಡಳಿಗಳಿಗೆ ಗ್ರಾಮಸಭೆಗಳಲ್ಲಿ ಬೀದಿ ನಾಯಿಗಳ ಹಾವಳಿ ಚರ್ಚೆಯ ತಲೆನೋವಾಗಿ ಪರಿಣಮಿಸುತ್ತಿವೆ. ಇದೀಗ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಮತ್ತೊಮ್ಮೆ ಒತ್ತಾಯ ಕೇಳಿ ಬಂದಿದ್ದು, ಪಶುಪಾಲನಾ ಇಲಾಖೆಯೂ ಇದಕ್ಕೆ ಸಿದ್ದತೆ ನಡೆಸುತ್ತಿದೆ.
ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಂತೆ ಸಾರ್ವಜನಿಕರ ಪಾತ್ರವೂ ಪ್ರಮುಖವಾಗಿದೆ. ಮನೆ ನಾಯಿಗಳಿಗೂ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ಕಡ್ಡಾಯವಾಗಿ ಹಾಕಿಸುವುದನ್ನು ಮರೆಯಬಾರದು.

816 ನಾಯಿಗಳಿಗೆ ಶಸ್ತ್ರಚಿಕಿತ್ಸೆ

ಕಾಪು ಪುರಸಭೆ ಹಾಗೂ 16 ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಕಳೆದ ಬಾರಿ ನಡೆದ ಅಭಿಯಾನದಲ್ಲಿ 816 ಬೀದಿ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮತ್ತು 823 ನಾಯಿಗಳಿಗೆ ರೇಬಿಸ್ ಲಸಿಕಾ ಕಾರ್ಯ ನಡೆದಿತ್ತು. ಪಡುಬಿದ್ರಿ, ಬೆಳ್ಳೆ, ಕಟಪಾಡಿ ಗ್ರಾಪಂಗಳಿಂದ ತಲಾ 1 ಲಕ್ಷ ರೂ., ಪಲಿಮಾರು, ಹೆಜಮಾಡಿ, ಮುದರಂಗಡಿ, ಮಜೂರು, ಶಿರ್ವದಿಂದ ತಲಾ 75 ಸಾವಿರ ರೂ., ಎಲ್ಲೂರು, ಬಡಾ, ಇನ್ನಂಜೆ, ಕೋಟೆ ತಲಾ 50 ಸಾವಿರ ರೂ., ಕುತ್ಯಾರು, ಕುರ್ಕಾಲು ತಲಾ 25 ಸಾವಿರ ರೂ., ಬೆಳಪು, ತೆಂಕ ಗ್ರಾಪಂನಿಂದ ತಲಾ 30 ಸಾವಿರ ರೂ. ಅನುದಾನ ಕ್ರೋಢಿಕರಿಸಲಾಗಿತ್ತು.

ಕಾಪು ಪುರಸಭೆ ಸಹಿತ ತಾಲೂಕಿನ ಗ್ರಾಪಂಗಳಿಂದ ಅನುದಾನ ಕ್ರೋಢಿಕರಿಸಿಕೊಂಡು ಕಳೆದ ವರ್ಷ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕಾ ಅಭಿಯಾನ ನಡೆಸಲಾಗಿತ್ತು. ಈ ಬಾರಿ ಮತ್ತೆ ಗ್ರಾಪಂಗಳ ಸಹಕಾರದೊಂದಿಗೆ ಶಸ್ತ್ರ ಚಿಕಿತ್ಸೆ ಅಭಿಯಾನವನ್ನು ವರ್ಷಾಂತ್ಯದಲ್ಲಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ವಾರದಲ್ಲಿ ಸಾಕು ನಾಯಿಗಳಿಗೆ ರೇಬಿಸ್ ಲಸಿಕಾ ಕಾರ್ಯವೂ ನಡೆಯಲಿದೆ.-ಡಾ. ಅರುಣ್ ಹೆಗ್ಡೆ, ಪಶುವೈದ್ಯಾಧಿಕಾರಿ, ಕಾಪು ತಾಲೂಕು
ಗ್ರಾಪಂಗಳ ಕ್ರಿಯಾಯೋಜನೆಯಲ್ಲಿ ನಿರ್ದಿಷ್ಟ ಮೊತ್ತ ಕಾಯ್ದಿರಿಸಲಾಗುತ್ತದೆ. ಆದರೆ ಒಂದು ನಾಯಿ ಶಸ್ತ್ರಚಿಕಿತ್ಸೆ ವೆಚ್ಚವೇ 1,600ರಿಂದ 2,000 ರೂ. ತನಕ ತಗಲುವುದರಿಂದ ಅನುದಾನ ಕ್ರೋಢಿಕರಣವೇ ಸವಾಲಾಗುತ್ತಿದೆ. ಮುಂದಿನ ವಾರ ಪಿಡಿಒಗಳ ಸಭೆಯಲ್ಲಿ ಪಶುವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು.-ಜೇಮ್ಸ್ ಡಿಸಿಲ್ವ, ಕಾರ್ಯನಿರ್ವಹಣಾಧಿಕಾರಿ, ಕಾಪು ತಾಪಂ.