ಯಲಬುರ್ಗಾ ತಾಲೂಕಿನ ಗುನ್ನಾಳ ಕೆರೆಯಲ್ಲಿ ಮಳೆ ನೀರು ನಿಂತಿರುವುದು. 
ಜಿಲ್ಲೆ

ತುಂಬಿ ತುಳುಕುತ್ತಿವೆ ಕೆರೆ ಕಟ್ಟೆಗಳು

ರುದ್ರಪ್ಪ ವಾಲಿ

ಯಲಬುರ್ಗಾ: ರಂತರ ಮಳೆಯಿಂದಾಗಿ ತಾಲೂಕಿನ ರೈತರ ಜಮೀನಲ್ಲಿ ವಿವಿಧ ಯೋಜನೆಯಡಿ ನಿರ್ಮಾಣಗೊಂಡ ಕೃಷಿಹೊಂಡ, ಕೆರೆಕಟ್ಟೆ, ನಾಲೆ, ಕಂದಕ ಬದು, ಚೆಕ್‌ಡ್ಯಾಮ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದ ಜಲಮೂಲ ಹೆಚ್ಚಳಕ್ಕೆ ಸಹಕಾರಿಯಾಗಿದೆ.

ರಾಜ್ಯದ ಮಳೆಯಾಶ್ರಿತ ಭೂಮಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸಲು ಮತ್ತು ಮಳೆ ನೀರನ್ನು ವ್ಯರ್ಥ ಮಾಡದೇ ರೈತರ ಜಮೀನಲ್ಲಿ ಕೃಷಿಹೊಂಡ ನಿರ್ಮಿಸಿ ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಿದೆ.

ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಕೃಷಿಭಾಗ್ಯ ಯೋಜನೆಯಡಿ ಯಲಬುರ್ಗಾ-19, ಹಿರೇವಂಕಲಕುಂಟಾ-17, ಕುಕನೂರು-20, ಮಂಗಳೂರು-16 ಸೇರಿದಂತೆ ಒಟ್ಟು 72 ಕೃಷಿಹೊಂಡ ನಿರ್ಮಿಸಲಾಗಿದೆ. ಇನ್ನೂ ನರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ ತಾಲೂಕಿನ 22 ಗ್ರಾಪಂ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಕೃಷಿಹೊಂಡ ತೆಗೆಯಲಾಗಿದೆ. ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಅವುಗಳಲ್ಲಿ ಅಧಿಕ ನೀರು ಸಂಗ್ರಹಗೊಂಡಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆ ಜತೆಗೆ ಮಳೆ ಕೈಕೊಟ್ಟ ಪರಿಸ್ಥಿತಿಯಲ್ಲಿ ಎರೆ ಭಾಗದಲ್ಲಿ ಬೆಳೆಗಳಿಗೆ ಹರಿಸಲು ಅನುಕೂಲವಾಗಲಿದೆ. ಇನ್ನೂ ಜನ ಜಾನುವಾರುಗಳ ದಾಹ ನೀಗಿಸಲು ವರದಾನವಾಗಲಿದೆ.

64 ಕೃಷಿಹೊಂಡಕ್ಕೆ ಅನುಮೋದನೆ: ಅಲ್ಲದೇ 2024-25ನೇ ಸಾಲಿನಲ್ಲಿ ಕೃಷಿಭಾಗ್ಯ ಯೋಜನೆಯಡಿ ಪ್ರತಿ ಹೋಬಳಿಗೆ 16ರಂತೆ ಎರಡೂ ತಾಲೂಕಿನ ರೈತರ ಜಮೀನಲ್ಲಿ ಒಟ್ಟು 64 ಕೃಷಿಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆ ಅನುಮೋದನೆ ನೀಡಿದೆ. ಇನ್ನೂ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ನಾನಾ ಗ್ರಾಪಂ ವ್ಯಾಪ್ತಿಯಲ್ಲಿ 10 ಕೃಷಿಹೊಂಡಗಳ ಕಾಮಗಾರಿ ನಿರ್ಮಾಣ ಹಂತದಲ್ಲಿದೆ.

ಕೆರೆಕಟ್ಟೆಗಳಲ್ಲಿ ಅಧಿಕ ನೀರು ಸಂಗ್ರಹ: ಕಳೆದ ಸಲ ಸತತ ಮಳೆ ಕೊರೆತೆಯಿಂದ ಜನಜಾನುವಾರುಗಳು ಜಲಸಂಕಷ್ಟ ಎದುರಿಸಿದವು. ಕೊಳವೆಬಾವಿಗಳ ಅಂತರ್ಜಲಮಟ್ಟ ಕುಸಿತದಿಂದ ಫಸಲು ಕೈಸೇರಲಿಲ್ಲ. ಇದರಿಂದ ರೈತವರ್ಗ ತೀವ್ರ ಸಂಕಷ್ಟ ಎದುರಿಸಿತ್ತು. ಈ ಬಾರಿ ಪ್ರಸಕ್ತ ಮುಂಗಾರು ಉತ್ತಮವಾಗಿದ್ದು, ಕೆರೆ ತುಂಬಿಸುವ ಯೋಜನೆ, ನರೇಗಾ ಸೇರಿದಂತೆ ವಿವಿಧ ಯೋಜನೆಯಡಿ ನಿರ್ಮಾಣಗೊಂಡ ಕೆರೆಕಟ್ಟೆ, ಚೆಕ್‌ಡ್ಯಾಮ್, ಕಂದಕ ಬದು, ನಾಲೆಗಳಲ್ಲಿ ಮಳೆ ನೀರು ಹೆಚ್ಚು ನಿಂತಿದೆ. ಪಟ್ಟಣದ ಕೆಂಪುಕೆರೆ, ಕೆಂಪಳ್ಳಿ (ಲಕಮನಗುಳೆ), ಕಲಭಾವಿ-ಚಿಕ್ಕವಂಕಲಕುಂಟಾ, ಬೇವೂರು-ನೆಲಜೇರಿ ಕೆರೆಯಲ್ಲಿ ಹೆಚ್ಚು ನೀರು ಹರಿದು ಬಂದಿದೆ. ಜಲಮೂಲ ಇಲ್ಲದೇ ಬತ್ತಿಹೋದ ಪಂಪ್‌ಸೆಟ್‌ಗಳಿಗೆ ಮರುಜೀವ ಸಿಗುವ ನಿರೀಕ್ಷೆ ರೈತ ವಲಯದಲ್ಲಿ ಮೂಡಿದೆ.

ಗುನ್ನಾಳ ಕೆರೆ ನಿರ್ಮಾಣ: ತಾಲೂಕಿನ ಗುನ್ನಾಳ ಗ್ರಾಮದ ಹೊರ ವಲಯದಲ್ಲಿ ಐಸಿಐಸಿಐ ಫೌಂಡೆಷನ್‌ನಿಂದ ಅಂದಾಜು 1.10 ಕೋಟಿ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣಗೊಂಡಿದೆ. ಸರಿಸುಮಾರು 4 ತಿಂಗಳು ಕಾಲ ಕೆಲಸ ನಡೆಸಲಾಗಿದೆ. ಕೆರೆಏರಿ, ಕಲ್ಲು ಪಿಚ್ಚಿಂಗ್, ಕೆರೆಖೋಡಿ ನಿರ್ಮಿಸಿ ಹೊರಮೈ ಸುತ್ತಲೂ ಗರಿಕೆ ಹುಲ್ಲು ಹಚ್ಚಲಾಗಿದೆ. ಮಳೆಯಿಂದಾಗಿ ಕೆರೆಯಲ್ಲಿ ಅಧಿಕ ನೀರು ಸಂಗ್ರಹವಾಗಿದೆ.

ಕ್ಷೇತ್ರದ ರೈತರು ಕೃಷಿಭಾಗ್ಯ ಯೋಜನೆಯಡಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿಹೊಂಡ ನಿರ್ಮಿಸಿಕೊಳ್ಳುವ ಜತೆಗೆ ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್‌ಸೆಟ್, ತಂತಿಬೇಲಿ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಇದರಿಂದ ಬೆಳೆಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ನೀರು ಒದಗಿಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು. ಪ್ರಾಣೇಶ ಹಾದಿಮನಿ ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ
ತಾಲೂಕಿನಲ್ಲಿ ನರೇಗಾ ಯೋಜನೆಯಡಿ ನಾನಾ ಕಾಮಗಾರಿ ಆರಂಭಿಸಿ, ನಿತ್ಯ ಸಾವಿರಾರು ಕೂಲಿಕಾರರಿಗೆ ಕೆಲಸ ನೀಡುವ ಜತೆಗೆ ಜಲಮೂಲ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕ ಕೃಷಿಹೊಂಡ ನಿರ್ಮಾಣ ಮತ್ತು ನಾಲಾ ಸುಧಾರಣೆ ಕೆಲಸ ನಿರ್ವಹಿಸಲಾಗಿದೆ. ಮಳೆಯಿಂದಾಗಿ ನೀರು ಸಂಗ್ರಹಗೊಂಡಿದೆ. ಇದರಿಂದ ರೈತ ವಲಯಕ್ಕೆ ಅನುಕೂಲವಾಗಲಿದೆ.ಸಂತೋಷ ಪಾಟೀಲ್ತಾಪಂ ಇಒ, ಯಲಬುರ್ಗಾ.