ಬೆಳಗಾವಿ: ಬಹು ರ್ಚಚಿತ, ಪರ-ವಿರೋಧಕ್ಕೆ ಕಾರಣವಾಗಿದ್ದ ಬಲವಂತದ ಮತಾಂತರ ತಡೆ ವಿಧೇಯಕ ವಿಚಾರದಲ್ಲಿ ಸರ್ಕಾರದ್ದು ಮಿಂಚಿನ ಓಟವಾದರೆ, ಶತಾಯಗತಾಯ ವಿರೋಧಿಸಲೇಬೇಕೆಂದು ಕಾದು ಕುಳಿತಿದ್ದ ಪ್ರತಿಪಕ್ಷ ಕಾಂಗ್ರೆಸ್ನದು ಆಮೆನಡಿಗೆಯಾಯಿತು. ಮಸೂದೆಗೆ ತೀವ್ರ ವಿರೋಧ, ಪರಸ್ಪರ ಘೋಷಣೆಗಳ ಮೊಳಗು, ಕಾಂಗ್ರೆಸ್ ಸಭಾತ್ಯಾಗದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನ ಪ್ರವೇಶಿಸಿದ್ದು ಗಮನಾರ್ಹ. ಎರಡೂ ಪಕ್ಷಗಳ ತದ್ವಿರುದ್ಧ ನಡೆಗೆ ವಿಧಾನಸಭೆ ಮಂಗಳವಾರ ಸಾಕ್ಷಿಯಾಯಿತು.
ಭೋಜನ ವಿರಾಮದ ಬಳಿಕ ಸದನ ಸೇರುತ್ತಿದ್ದಂತೆಯೇ ಸ್ಪೀಕರ್ ಪೂರಕ ಅಜೆಂಡಾ ಕೈಗೆತ್ತಿಕೊಂಡು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ವಿಧೇಯಕ ಮಂಡಿಸಲು ಅವಕಾಶ ಕಲ್ಪಿಸಿದರು. ಸಾರ್ವತ್ರಿಕವಾಗಿ ಮತಾಂತರ ನಿಷೇಧ ಕಾಯ್ದೆ ಎಂದೇ ಜನಜನಿತ ‘ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021’ ಅನ್ನು ಆರಗ ಜ್ಞಾನೇಂದ್ರ ಮಂಡಿಸಿದರು.
ಕಾಂಗ್ರೆಸ್ ದೌಡು: ಮೊಗಸಾಲೆಯಲ್ಲಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇನ್ನಿತರ ನಾಯಕರು ಗಡಬಡಿಸಿ ಸದನಕ್ಕೆ ದೌಡಾಯಿಸಿದರು. ಮಸೂದೆ ಚರ್ಚೆಗಲ್ಲ, ಸದನದಲ್ಲಿ ಮಂಡಿಸುವುದಕ್ಕೂ ವಿರೋಧ ವಿದೆ. ಸಂವಿಧಾನಬಾಹಿರ, ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ವ್ಯಕ್ತಿ ಸ್ವಾತಂತ್ರ್ಯ ಹರಣವಾಗ ಲಿದ್ದು, ಸರ್ಕಾರ ಕಳ್ಳ ಹಾದಿ ಹಿಡಿದಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದಾಗ, ಪಕ್ಷದ ಉಳಿದ ಸದಸ್ಯರು ಸಹಮತ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು. ಕಾಂಗ್ರೆಸ್ನ ಪ್ರತಿಭಟನೆ, ತೀವ್ರ ವಿರೋಧದ ಮಧ್ಯೆ ಸಿದ್ದರಾಮಯ್ಯ ಅವರು ‘ನಮಗೆ ಗೊತ್ತೇ ಇಲ್ಲ’ವೆಂಬುದನ್ನು ಸ್ಪೀಕರ್ ಅಲ್ಲಗಳೆದರು. ಪೂರಕ ಅಜೆಂಡಾ ಕಳುಹಿಸಿಕೊಟ್ಟಿದ್ದು, ಭೋಜನ ವಿರಾಮಕ್ಕೆ ನಿಮ್ಮ ಪಕ್ಷದ (ಕಾಂಗ್ರೆಸ್) ವ್ಹಿಪ್ಗೆ ಮಾಹಿತಿ ನೀಡಿದ್ದೆ. ಕದ್ದು ಮುಚ್ಚಿಡುವಂಥದ್ದೇನಿಲ್ಲ. ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಮುಚ್ಚಿಡುವಂಥದ್ದೇನಿಲ್ಲ, ಕೋರಂ ಆದ ಬಳಿಕವೇ ವಿಧೇಯಕ ಮಂಡಿಸಲು ಸ್ಪೀಕರ್ ಅನುಮತಿ ಕೊಟ್ಟಿದ್ದಾರೆಂದು ಆರಗ ಜ್ಞಾನೇಂದ್ರ ಸಮರ್ಥಿಸಿಕೊಂಡರೆ, ರಾಜಾರೋಷವಾಗಿ ಬಿಲ್ ಅನ್ನು ಸದನದ ಮುಂದಿಟ್ಟಿದ್ದೇವೆ ಎಂದು ಆರ್.ಅಶೋಕ್ ಹೇಳಿದರು.
ಸಮ್ಮತಿಸಿದ ನಂತರ ಸಭಾತ್ಯಾಗ: ಮಸೂದೆ ಪ್ರತಿ ಕೊಟ್ಟಿದ್ದು, ಪೂರ್ಣ ಓದಿಕೊಂಡು ಬನ್ನಿ. ಚರ್ಚೆಗೆ ಮುಕ್ತ ಅವಕಾಶವಿದೆ ಎಂಬ ಸ್ಪೀಕರ್ ಮಾತಿಗೆ ಸಚಿವ ಮಾಧುಸ್ವಾಮಿ ಧ್ವನಿಗೂಡಿಸಿದರು. ಮಸೂದೆ ಮಂಡನೆಯಾದ ಮೇಲೆ ಸದನದ ಆಸ್ತಿಯಾಗಿದ್ದು, ಪರ್ಯಾಲೋಚನೆ ಕಾಲಕ್ಕೆ ವಿಸõತ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದರು. ಸರ್ಕಾರ ನೀಡಿದ ಉತ್ತರಕ್ಕೆ ಕಾಂಗ್ರೆಸ್ ಒಪ್ಪಿ, ಅತಿವೃಷ್ಟಿ ಮೇಲೆ ನಡೆದ ಚರ್ಚೆಗೆ ಆರ್.ಅಶೋಕ್ ಉತ್ತರಿಸಲಾರಂಭಿಸಿ 10 ನಿಮಿಷ ಕಳೆದ ಬಳಿಕ ಸಿದ್ದರಾಮಯ್ಯ ಮತ್ತೆ ಎದ್ದು ನಿಂತರು. ಈ ನಡುವೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಹಾಗೂ ಯು.ಟಿ.ಖಾದರ್ ಆಪ್ತ ಸಮಾಲೋಚನೆ ನಡೆಸಿದರು. ಬಳಿಕ ಅವಸರದಲ್ಲಿ ವಿಧೇಯಕ ಮಂಡಿಸಿದ ಸರ್ಕಾರದ ನಡೆ ವಿರೋಧಿಸಿ ಸಭಾತ್ಯಾಗ ಮಾಡುವುದಾಗಿ ಸಿದ್ದರಾಮಯ್ಯ ಹೇಳಿ ಹೊರೆ ನಡೆದರೆ, ಉಳಿದ ಸದಸ್ಯರು ಹಿಂಬಾಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಧಿಕ್ಕಾರ ಮೊಳಗಿಸಿದರೆ, ಬಿಜೆಪಿ ‘ಶೇಮ್ ಶೇಮ್ ಎಂದು ಹೀಗಳೆಯಿತು. ಆರ್.ಅಶೋಕ್ ಉತ್ತರಿಸುವುದಕ್ಕೆ ಒಪ್ಪಿದವರು, ನಂತರ ನಾಲ್ಕು ಜನ ಸೇರಿಕೊಂಡು ತಮ್ಮ ತಮ್ಮಲ್ಲೇ ರ್ಚಚಿಸಿ, ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಕೆಣಕಿದರು.
ಬೇಜವಾಬ್ದಾರಿ ಪ್ರತಿಪಕ್ಷ ಎಂದ ಸಿಎಂ: ಮತಾಂತರ ಜ್ವಲಂತ ಸಮಸ್ಯೆ. ಮಹಿಳೆಯರಿಗೆ ಮತ್ತು ಯುವಕರಿಗೆ ಅಪಾಯಕಾರಿ. ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಈ ಕಾಯ್ದೆ ವಿರೋಧಿಸುತ್ತಿದೆ. ಇದೊಂದು ಬೇಜಾಬ್ದಾರಿ ಪ್ರತಿಪಕ್ಷ. ಕೇವಲ ಭಾಷಣ, ಧರಣಿಗಾಗಿ ಬೆಳಗಾವಿಗೆ ಬಂದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಸಚಿವ ಸಂಪುಟ ತೀರ್ವನದಂತೆ ವಿಧೇಯಕ ಮಂಡನೆ ಮಾಡಲಾಗಿದೆ. ಮಂಡಿಸುವ ವೇಳೆ ಪ್ರತಿಪಕ್ಷ ನಾಯಕರು ಇರಲಿಲ್ಲ. ಕರೆಗಂಟೆ ಇದ್ದರೂ ಬಂದಿರಲಿಲ್ಲ. ವೋಟ್ ಬ್ಯಾಂಕ್ ಸಲುವಾಗಿ ಕಲಾಪ ಬಹಿಷ್ಕಾರ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಯ್ದೆ ಬೆಂಬಲಿಸುವಂತೆ ಬಿಎಸ್ವೈ ಮನವಿ: ಮತಾಂತರ ನಿಲ್ಲಬೇಕು ಎನ್ನುವ ಉದ್ದೇಶದಿಂದ ಕಾಯ್ದೆ ಜಾರಿ ತುರುತ್ತಿದ್ದೇವೆ. ಕಾಂಗ್ರೆಸ್ ಇದಕ್ಕೆ ವಿರೋಧ ಮಾಡದೆ ಬೆಂಬಲಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು. ಈಗಾಗಲೆ ದೇಶದ ಹಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದರಂತೆ ನಮ್ಮ ರಾಜ್ಯದಲ್ಲೂ ಇದನ್ನು ಜಾರಿ ತರುತ್ತಿದ್ದೇವೆ. ಪ್ರತಿಪಕ್ಷಗಳು ಸಹಕಾರ ನೀಡಬೇಕು ಎಂದರು.
ಸವಾಲ್-ಜವಾಬ್: ಸದನದಲ್ಲಿ ಈ ವಿಧೇಯಕ ಮಂಡಿಸುವುದಕ್ಕೆ ನಮ್ಮ ವಿರೋಧವಿದೆ. ತರಾತುರಿಯಲ್ಲಿ ಮಂಡಿಸಿದ್ದರ ಹಿಂದೆ ದುರುದ್ದೇಶವಿದೆ ಎಂದು ಸಿದ್ದರಾಮಯ್ಯ ಅಬ್ಬರಿಸಿದರೆ, ಅಧಿವೇಶನದ ಮೊದಲ ದಿನದಿಂದ ಹೇಳ್ತಾಯಿದ್ದೇವೆ ಮುಚ್ಚು ಮರೆಯಿಲ್ಲ ಎಂದು ಮಾಧುಸ್ವಾಮಿ ಏರುಧ್ವನಿಯಲ್ಲಿ ಉತ್ತರಿಸಿದರು. ದುರುದ್ದೇಶಪೂರ್ವಕ ಕ್ರಮವಿದು ಎಂದು ಸಿದ್ದರಾಮಯ್ಯ ಮತ್ತೆ ಚುಚ್ಚಿದಾಗ, ಸದುದ್ದೇಶವೋ ದುರುದ್ದೇಶವೋ ಚರ್ಚೆಗೆ ಬನ್ನಿ ಎಂದು ಮಾಧುಸ್ವಾಮಿ ಸವಾಲೆಸೆದರು. ಚರ್ಚೆಗೆ ಸಿದ್ಧರಿದ್ದೇವೆ, ದುರುದ್ದೇಶ ಬಯಲು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಗುಡುಗಿದರೆ, ನಾವೂ ಚರ್ಚೆಗೆ ಸೈ, ಯಾರ ಉದ್ದೇಶ ಏನೆಂಬುದು ಜನ ತೆಗೆ ಗೊತ್ತಾಗಲಿ ಎಂದು ಮಾಧು ಸ್ವಾಮಿ ಜವಾಬ್ ನೀಡಿದರು.
ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ. ಸರ್ಕಾರ ವಿಧೇಯಕ ಮಂಡನೆ ವಿಚಾರದಲ್ಲಿ ಸ್ಪಷ್ಟತೆ ಹೊಂದಿಲ್ಲದ ಸಂದರ್ಭದಲ್ಲಿಯೇ ವಿಧಾನಪರಿಷತ್ ಸದಸ್ಯ ಬಿಜೆಪಿಯ ತುಳಸಿ ಮುನಿರಾಜು ಗೌಡ ಖಾಸಗಿ ವಿಧೇಯಕ ಮಂಡಿಸಲು ತಯಾರಿ ಮಾಡಿ ಸಭಾಪತಿ ಅವರಿಗೆ ಪ್ರಸ್ತಾವನೆ ಇಟ್ಟಿದ್ದರು. ಅವರೀಗ ಸಂತಸದಲ್ಲಿ ತೇಲುತ್ತಿದ್ದು, ಮಸೂದೆ ಮಂಡನೆ ಕ್ರಮ ಖುಷಿ ತಂದಿದೆ ಎಂದು ವಿಜಯವಾಣಿಗೆ ಪ್ರತಿಕ್ರಿಯಿಸಿದರು. ಮತಾಂತರ ಪಿಡುಗಿಗೆ ಸಾಕಷ್ಟು ಮಂದಿ ಬಲಿಯಾಗುತ್ತಿದ್ದರು, ಇಂಥದ್ದೊಂದು ಕಾನೂನಿನ ಅವಶ್ಯಕತೆ ಇತ್ತು. ಸಿಎಂ ನಿರ್ಧಾರ ಖುಷಿತಂದಿದೆ ಎಂದರು. ಖಾಸಗಿ ವಿಧೇಯಕ ಕುರಿತು ವಿಜಯವಾಣಿ ವಾರದ ಹಿಂದಷ್ಟೇ ವರದಿ ಪ್ರಕಟಿತ್ತು, ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗಿತ್ತು.
ಮಸೂದೆ ಪ್ರತಿ ಹರಿದು ತೂರಿದ ಡಿಕೆಶಿ: ಆತುರಾತುರವಾಗಿ ಮಸೂದೆ ಮಂಡನೆಯ ಔಚಿತ್ಯವನ್ನು ಏರುಧ್ವನಿಯಲ್ಲಿ ಪ್ರಶ್ನಿಸಿದ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್, ಮಸೂದೆ ಪ್ರತಿಯನ್ನು ಹರಿದು ತೂರಿ ಆಕ್ರೋಶ ಹೊರ ಹಾಕಿದರು. ಮಸೂದೆ ಪ್ರತಿ ಹರಿದು ಹಾಕಿದ ಹಿರಿಯ ಸದಸ್ಯರ ವರ್ತನೆ ಸರಿಯಲ್ಲವೆಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.
ರೈಲು ಹೋದಮೇಲೆ ಹುಯಿಲೆಬ್ಬಿಸಿದಂತೆ!: ರೈಲು ಹೋದ ಮೇಲೆ ಟಿಕೆಟ್ ತಗೊಂಡು ರೈಲು ಹೋಯಿತೆಂದು ಹುಯಿಲೆಬ್ಬಿಸುತ್ತಿರುವಂತಿದೆ ಎಂದು ಸ್ಪೀಕರ್ ಕಾಂಗ್ರೆಸ್ನವರ ಕಾಲೆಳೆದಾಗ, ಸಿಗ್ನಲ್ ಇಲ್ಲದೇ ಓಡಿಸಿದ್ದೀರಿ ಎಂದು ಸಿದ್ದರಾಮಯ್ಯ ಕುಟುಕಿದರು. ನಮ್ಮದು ಡಬಲ್ ಇಂಜಿನ್ ಫಾಸ್ಟ್ ಆಗಿ ಹೋಗಿದೆ ಎಂದು ಆರ್.ಅಶೋಕ್ ತಿರುಗೇಟು ಕೊಟ್ಟರು. ‘ಕಂಡಿದ್ದೀನಿ ಸುಮ್ಕಿರಯ್ಯ, ಡಬಲ್ ಇಂಜಿನ್ನಿಂದಲೇ ರಾಜ್ಯಕ್ಕೆ ಅನ್ಯಾಯವಾಗಿದೆ’ ಎಂದು ಸಿದ್ದರಾಮಯ್ಯ ತಿವಿದರು.
ಕಾಂಗ್ರೆಸ್-ಬಿಜೆಪಿಗೆ ಎಚ್ಡಿಕೆ ವ್ಯಂಗ್ಯ: ಮಸೂದೆ ಮೇಲಿನ ಚರ್ಚೆಗೆ ಅವಕಾಶ ಕೊಡುವೆ ಎಂಬ ಸ್ಪೀಕರ್ ಭರವಸೆಗೆ ಕಾಂಗ್ರೆಸ್ ನಾಯಕರು ಸಮಾಧಾನಪಟ್ಟುಕೊಂಡು ಪ್ರತಿಭಟನೆ ಕೈಬಿಟ್ಟರು. ಈ ಮಸೂದೆ ಬಗ್ಗೆ ನಾಳೆಯೇ ರ್ಚಚಿಸದಿದ್ದರೆ ದೇಶವೇನೂ ಮುಳುಗಲ್ಲ, ರೈತರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದ ಎಚ್. ಡಿ.ಕುಮಾರಸ್ವಾಮಿ ಅತ್ತ ಕಾಂಗ್ರೆಸ್ಗೆ, ತರಾತುರಿಯಲ್ಲಿ ಗೋಹತ್ಯೆ ನಿಷೇಧಿಸಿ ರೈತರಿಗೆ ಹೊರೆ ಹೊರಿಸಿದಿರಿ ಎಂದು ಇತ್ತ ಬಿಜೆಪಿ ಬಗ್ಗೆಯೂ ವ್ಯಂಗ್ಯವಾಡಿದರು.
ಕುಮಾರಸ್ವಾಮಿ-ಈಶ್ವರಪ್ಪ ವಾಗ್ವಾದ: ಮುಸ್ಲಿಮರು, ಕ್ರೖೆಸ್ತರನ್ನು ತೃಪ್ತಿಪಡಿಸಲೆಂದು ಕಾಂಗ್ರೆಸ್ನವರು ಸಭಾತ್ಯಾಗ ಮಾಡಿದ್ದಾರೆ. ಹಿಂದು ರಾಷ್ಟ್ರವನ್ನು ಪಾಕಿಸ್ತಾನ ಮಾಡಲು ಬಿಡಲ್ಲವೆಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ ಮಾತಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆಯಿತು. ಮತಾಂತರಕ್ಕೆ ನಾವು-ನೀವು ಕಾರಣ. ದೇಶದ ಮಣ್ಣಿನಲ್ಲಿ ಸತ್ವವಿದೆ, ಯಾರು ಹಾಳು ಮಾಡಲಾಗದು. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡಬೇಡಿ ಎಂದು ಎಚ್ಡಿಕೆ ಹೇಳಿದಾಗ, ಬಲವಂತದ ಮತಾಂತರ ತಡೆಯಲೆಂದು ಈ ಕಾಯ್ದೆ ತರಬೇಕೆಂದಿದ್ದೇವೆ ಎಂದು ಈಶ್ವರಪ್ಪ ಸಮಜಾಯಿಷಿ ನೀಡಿದರು. ಮಾತಿನ ಚಕಮಕಿ ಮುಂದುವರಿದಾಗ ಸ್ಪೀಕರ್ ಮಧ್ಯೆ ಪ್ರವೇಶಿಸಿ, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಟ್ಟರು.
ಮತಾಂತರ ನಿಷೇಧ ಕಾಯ್ದೆಯನ್ನು ನಮ್ಮ ಪಕ್ಷ ಖಂಡಿತವಾಗಿ ಖಂಡಿಸುತ್ತದೆ. ನಾವು ಈ ಕಾಯ್ದೆಗೆ ಬೆಂಬಲ ಕೊಡಲ್ಲ. ಇಂತಹ ಕಾಯ್ದೆಗಳನ್ನು ತರುವ ಬದಲು ಜನರ ಜೀವನ ಮಟ್ಟ ಸುಧಾರಿಸುವ ಕೆಲಸ ಮಾಡಲಿ.
| ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ
ಇಸ್ಕಾನ್, ಅಮೃತಾನಂದ ಮಯಿ ಆಶ್ರಮ ಸೇರಿ ಹಲವೆಡೆ ವಿದೇಶದಿಂದ ಅನ್ಯ ಧರ್ಮದವರು ಬಂದು ಹರೇ ರಾಮ ಹರೇ ಕೖಷ್ಣ ಎಂದು ಭಜನೆ ಮಾಡುತ್ತಾರೆ. ಹೀಗಿರುವಾಗ ಈ ಮಸೂದೆ ಎಲ್ಲರಿಗೂ ಕಸಿವಿಸಿ ವಾತಾವರಣ ಸೃಷ್ಟಿಸುತ್ತಿದೆ
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಸರ್ಕಾರವು ಸಭಾಧ್ಯಕ್ಷರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಕದ್ದುಮುಚ್ಚಿ ಮಸೂದೆ ಮಂಡಿಸಿದೆ. ಇದು ಆರ್ಎಸ್ಎಸ್ನವರ ಅಜೆಂಡಾ. ಚುನಾವಣೆಯಲ್ಲಿ ಹೋದ ಮಾನ ಉಳಿಸಿಕೊಳ್ಳಲು ಸರ್ಕಾರ ಸಂವಿಧಾನಬಾಹಿರ ಕಾನೂನು ಜಾರಿ ಮಾಡಲು ಹೊರಟಿದೆ.
| ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ಧಾರ್ವಿುಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪು್ಪ ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನುಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ‘ಕರ್ನಾಟಕ ಧಾರ್ವಿುಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ’ ಮಂಡನೆಯಾಗಿದೆ. ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಆಮಿಷ ಎಂದರೆ
- ನಗದು ಅಥವಾ ವಸ್ತುವಿನ ರೂಪದಲ್ಲಿ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಭೌತಿಕ ಪ್ರಯೋಜನವೆಂದು ಪರಿಗಣನೆ. ? ಯಾವುದೇ ಧಾರ್ವಿುಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ ನೀಡುತ್ತೇವೆ ಅಥವಾ ಮದುವೆಯಾಗುವುದಾಗಿ ವಾಗ್ದಾನ. ? ಉತ್ತಮ ಜೀವನಶೈಲಿ, ದೈವಿಕ ಅಸಂತೋಷ, ಅನ್ಯಥಾ ಯಾವುದೇ ಧರ್ಮದ ಅವಿಭಾಜ್ಯ ಅಂಗವಾಗಿರುವ ಪದ್ಧತಿಗಳು, ಸಂಪ್ರದಾಯಗಳು ಅಥವಾ ಆಚರಣೆಗಳನ್ನು ಇನ್ನೊಂದು ಧರ್ಮಕ್ಕೆ ಎದುರಾಗಿ ಧಕ್ಕೆಯಾಗುವ ರೀತಿ ಚಿತ್ರಣ.
- ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಣ.
ಒತ್ತಾಯ ಎಂದರೆ
- ಯಾವುದೇ ವ್ಯಕ್ತಿಯನ್ನು ಶಾರೀರಿಕ ಹಾನಿ ಉಂಟು ಮಾಡುವ ಅಥವಾ ಅದರ ಬೆದರಿಕೆವೊಡ್ಡುವ ಮಾನಸಿಕ ಒತ್ತಡ, ದೈಹಿಕ ಪ್ರಯೋಗ ಬಳಸಿ, ಆತನ ಇಚ್ಛೆಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಒತ್ತಾಯಿಸವುದು. ? ಮತಾಂತರ ಎಂದರೆ, ಯಾರೇ ವ್ಯಕ್ತಿಯು ತನ್ನ ಸ್ವಂತ ಧರ್ಮವನ್ನು ತ್ಯಜಿಸಿ ಮತ್ತೊಂದು ಧರ್ಮವನ್ನು ಅಳವಡಿಸಿಕೊಳ್ಳುವುದು. ? ಮತಾಂತರ ಮಾಡುವವನು ಎಂದರೆ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಯಾವುದೇ ಮತಾಂತರದ ಕಾರ್ಯವನ್ನು ನಿರ್ವಹಿಸುವ ಹಾಗೂ ಪಾದ್ರಿ, ಅರ್ಚಕ, ಪುರೋಹಿತ, ಪಂಡಿತ, ಮೌಲ್ವಿ ಅಥವಾ ಮುಲ್ಲಾ ಮೊದಲಾದಂಥ ಹೆಸರಿನಿಂದ ಕಡೆಯಲ್ಪಡುವ ಯಾವುದೇ ಧರ್ಮದ ವ್ಯಕ್ತಿ.
ಯಾರು ದೂರು ಕೊಡಬಹುದು?: ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು, ಸೋದರ, ಸೋದರಿ ಅಥವಾ ಆತನ ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿಯಾದವರು, ಯಾವುದೇ ರೂಪದಲ್ಲಿ ಸಹವರ್ತಿ, ಸಹೋದ್ಯೋಗಿಯಾದ ಇತರ ಯಾರಾದರೂ ಮತಾಂತರದ ಬಗ್ಗೆ ದೂರು ದಾಖಲು ಮಾಡಬಹುದು.
ಧಾರ್ವಿುಕ ಮತಾಂತರೋತ್ತರ ಘೋಷಣೆ: ನಿಯಮಬದ್ಧ ಮತಾಂತರ ಪ್ರಕ್ರಿಯೆ ಬಳಿಕ ಮತಾಂತರಗೊಂಡ ವ್ಯಕ್ತಿಯು ಮತಾಂತರಕ್ಕೆ ಮೊದಲು ಪಡೆಯುತ್ತಿದ್ದ ಸಾಮಾಜಿಕ ಸ್ಥಾನಮಾನ ಅನುಭವಿಸುವ ಅಥವಾ ಸರ್ಕಾರದಿಂದ ಪಡೆಯುತ್ತಿದ್ದ ಹಣಕಾಸಿನ ಪ್ರಯೋಜನಗಳನ್ನು ಸ್ವೀಕರಿಸುವ ಹಕ್ಕಿನ ವಿಷಯದಲ್ಲಿ ಪುನರ್ ವರ್ಗಿಕರಿಸಲಾಗುತ್ತದೆ. ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಇತರ ಸಂಬಂಧಪಟ್ಟ ಇಲಾಖೆ, ನಗರ -ಗ್ರಾಮೀಣ ಸ್ಥಳೀಯ ಸಂಸ್ಥೆ ಸಿಬ್ಬಂದಿ, ಶೈಕ್ಷಣಿಕ ಸಂಸ್ಥೆಗಳ ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ದಾಖಲೆಗಳಲ್ಲಿ ಮತಾಂತರದ ಬಗ್ಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳಲ್ಲಿ ನಮೂದಿಸುವಂತೆ ಮಾಡಬೇಕಾಗುತ್ತದೆ.
ಮದುವೆ ಅಸಿಂಧು!: ಮತಾಂತರದ ಏಕಮಾತ್ರ ಉದ್ದೇಶದಿಂದ ನಡೆದ ಮದುವೆಯನ್ನು ಕೌಟುಂಬಿಕ ನ್ಯಾಯಾಲಯವು ಅಧಿಕೃತ ಮತ್ತು ಶೂನ್ಯ ಎಂದು ಘೋಷಿಸತಕ್ಕದ್ದು.
ಜಾಮೀನುರಹಿತ: ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973ರಲ್ಲಿ (1974ರ ಕೇಂದ್ರ ಅಧಿನಿಯಮ 2) ಏನೇ ಒಳಗೊಂಡಿದ್ದರೂ, ಈ ಅಧಿನಿಯಮದ ಅಡಿಯಲ್ಲಿ ಎಸಗಲಾದ ಪ್ರತಿಯೊಂದು ಅಪರಾಧವು ಜಾಮೀನು ರಹಿತವಾಗಿರುತ್ತದೆ.
ನಮೂನೆಗಳು: ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಉದ್ದೇಶಿತ ಮತಾಂತರದ ಕುರಿತು ಡಿಸಿಗೆ ಸಲ್ಲಿಸುವ ನೋಟಿಸ್ನಲ್ಲಿ ವ್ಯಕ್ತಿಯ ಹೆಸರು, ತಂದೆ-ತಾಯಿ ಹೆಸರು, ವಿಳಾಸ, ವಯಸ್ಸು, ಲಿಂಗ, ವೃತ್ತಿ ಮತ್ತು ಮಾಸಿಕ ವರಮಾನ, ಅವಲಂಬಿತರು, ಅಪ್ರಾಪ್ತರಿದ್ದರೆ ಅವರ ಮಾಹಿತಿ, ಮತಾಂತರಕ್ಕೆ ಉದ್ದೇಶಿಸಲಾದ ಸ್ಥಳದ ಮಾಹಿತಿ, ಮತಾಂತರದ ದಿನಾಂಕ, ಧಾರ್ವಿುಕ ಅರ್ಚಕ ಮತ್ತು ಅವರ ಮಾಹಿತಿಯೊಂದಿಗೆ ಸತ್ಯಾಪನೆ ಘೋಷಣೆ ಮಾಡಿ ಸಹಿ ಹಾಕಿ ಸಲ್ಲಿಸಬೇಕಾಗುತ್ತದೆ.
ನಿತ್ಯವೂ ಬೆಳಗ್ಗೆಯಿಂದ ಸಂಜೆವರೆಗೂ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗುತ್ತಿ ರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಬದ್ಧತೆಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊಂಡಾಡಿದರು. ಬುಧವಾರ ವಿಧಾನಸಭೆ ಕಲಾಪವನ್ನು 3 ಗಂಟೆಗೆ ಮುಂದೂಡಿದ ಬಳಿಕ, ಮೊಗಸಾಲೆಯಲ್ಲಿ ಎದುರಾದ ಯಡಿಯೂರಪ್ಪ ಅವರ ಕೈಕುಲುಕಿದ ಎಚ್ಡಿಕೆ, ‘ಈ ಇಳಿ ವಯಸ್ಸಿನಲ್ಲಿಯೂ ಬೆಳಗ್ಗೆಯಿಂದ-ಕಲಾಪ ಮುಗಿಯುವ ತನಕ ಸದನಲ್ಲಿ ಕುಳಿತುಕೊಳ್ಳುತ್ತಿದ್ದೀರಿ. ಎಲ್ಲರ ಮಾತುಗಳನ್ನು ಅಷ್ಟೇ ಗಂಭೀರವಾಗಿ ಆಲಿಸುತ್ತಿರುವ ನಿಮ್ಮ ಸಹನಶಕ್ತಿ ಮೆಚ್ಚಲೇಬೇಕು ಸರ್’ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಎಚ್.ಡಿ.ರೇವಣ್ಣ, ‘ಅದು ನಿಮಗೆ ಮತ್ತು ನಮ್ಮ ತಂದೆಯವರಾದ ಎಚ್.ಡಿ.ದೇವೇಗೌಡರಿಗೆ ಮಾತ್ರ ಸಾಧ್ಯ’ ಎಂದರು.
ನೀರಾವರಿಗೆ ಬೆಂಬಲ: ರಾಜ್ಯದ ನೀರಾವರಿಗೆ ಸಂಬಂಧಿಸಿ ಯಾರೇ ಕೇಂದ್ರ ಸರ್ಕಾರದ ಗಮನ ಸೆಳೆದರೂ ನಮ್ಮ ಬೆಂಬಲ ಸದಾ ಇರಲಿದೆ ಎಂದು ಎಚ್ಡಿಕೆ ಹೇಳಿದರು. ‘ಕಾಂಗ್ರೆಸ್ ನಡೆ -ಕೃಷ್ಣೆ ಕಡೆ’ ಎಂದು ಈ ಹಿಂದೆ ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದ್ದರು. 5 ವರ್ಷ ಅವರ ಸರ್ಕಾರ ಇತ್ತು. ಯಾವ ಅಭಿವೃದ್ಧಿ ಆಗಿದೆ? ಪಾದಯಾತ್ರೆ ಮತಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾದಯಾತ್ರೆ ಮಾಡಲಿ ಸಂತೋಷ. ಅವರಿಗೆ ಒಳ್ಳೆಯದಾಗಲಿ ಎಂದರು.
ಡ್ರಗ್ಸ್ ಜಾಲ ಕಡಿವಾಣಕ್ಕೆ ಪರಿಣಾಮಕಾರಿ ಬೀಟ್: ರಾಜ್ಯದಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿ 2021ರಲ್ಲಿ ನವೆಂಬರ್ವರೆಗೆ 4965 ಪ್ರಕರಣ ದಾಖಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಬಿಜೆಪಿಯ ಸುಕುಮಾರ ಶೆಟ್ಟಿ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದು, 2018ರಲ್ಲಿ 1030 ಪ್ರಕರಣ, 2019ರಲ್ಲಿ 1661, 2020ರಲ್ಲಿ 4062 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕರ ಕೊರತೆ ನೀಗಿಸಲು ತಕ್ಷಣ ಕ್ರಮ: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಶಾಲೆಗಳಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮರಳಿ ಶಾಲೆಗೆ ತರಲು ಈಗಾಗಲೆ ಮುಚ್ಚಲ್ಪಟ್ಟ ಸರ್ಕಾರಿ ಉರ್ದು ಶಾಲೆಗಳ ಜಾಗದಲ್ಲಿ 200 ಮೌಲಾನಾ ಆಜಾದ್ ಮಾದರಿ ಶಾಲೆ ನಡೆಸಲಾಗುತ್ತಿದೆ. ಇಲ್ಲಿನ ಶಿಕ್ಷಕರ ಕೊರತೆ ನೀಗಿಸಲು ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ. ಜತೆಗೆ ತಾತ್ಕಾಲಿಕ ಸಮಸ್ಯೆ ನಿವಾರಣೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಏಕೆ ಬೇಕು ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಮಾರ್ಗಮಧ್ಯೆ ಸಂಚಾರ ದಟ್ಟಣೆಯಿಂದ ಸಕಾಲದಲ್ಲಿ ನಿಗದಿತ ಸ್ಥಳಕ್ಕೆ ತಲುಪಲಾಗದು. ಪದೇಪದೆ ಈ ಸಮಸ್ಯೆ ಅನುಭವಿಸುತ್ತಿದ್ದು, ಕಾರ್ಗೆ ಸೈರನ್ ಅಳವಡಿಸಿದರೆ ಅನುಕೂಲವಾಗಲಿದೆ ಎಂದು ಸ್ವಾಮೀಜಿಗಳಿಬ್ಬರೂ ವಿವರಿಸಿದ್ದಾರೆ. ಸೈರನ್ ಬೇಡಿಕೆಯನ್ನು ನಿರಾಕರಿಸಲಾಗದೆ, ಒಪ್ಪಿಕೊಳ್ಳಲೂ ಆಗದ ಆರಗ, ‘ಆಯಿತು ಪರಿಶೀಲಿಸಿ ಕ್ರಮಕೈಗೊಳ್ಳುವೆ’ ಎಂಬ ಭರವಸೆ ನೀಡಿ, ಸಾಗ ಹಾಕಿದರು ಎಂದು ಮೂಲಗಳು ಮಾಹಿತಿ ನೀಡಿವೆ.