ಜಿಲ್ಲೆ

ಸರ್ಕಾರಕ್ಕೆ ಓವರ್​ ಡ್ರಾಫ್ಟ್​ ಸಂಜೀವಿನಿ: ಆರ್​ಬಿಐ ಸಮ್ಮತಿ, 25,000 ಕೋಟಿ ರೂ.ವರೆಗೆ ಅವಕಾಶ

ಬೆಂಗಳೂರು: ಕರೊನಾ ಪರಿಣಾಮವಾಗಿ ಸರ್ಕಾರಿ ನೌಕರರ ವೇತನ, ಪಿಂಚಣಿ, ಋಣ ನಿರ್ವಹಣೆಗೆ ಸಂಬಂಧಿಸಿದಂತೆ ಸಂಪನ್ಮೂಲ ಕ್ರೋಡೀಕರಿಸಲು ಇದ್ದ ಎಲ್ಲ ದಾರಿಗಳು ಮುಚ್ಚಿರುವುದರಿಂದಾಗಿ ರಾಜ್ಯ ಸರ್ಕಾರವೀಗ ಓವರ್ ಡ್ರಾಫ್ಟ್ ಎಂಬ ಬ್ರಹ್ಮಾಸ್ತ್ರದ ಕಡೆಗೆ ಕಣ್ಣು ಹಾಯಿಸಿದೆ. ಕೇಂದ್ರ ಸರ್ಕಾರ ಸೇರಿದಂತೆ ಯಾವುದೇ ರಾಜ್ಯಗಳ ಬಳಿಯೂ ಸಂಪನ್ಮೂಲ ಸಂಗ್ರಹಿಸುವುದಕ್ಕೆ ಬೇರೆ ದಾರಿ ಇಲ್ಲದ ಪರಿಣಾಮ ಓವರ್ ಡ್ರಾಫ್ಟ್ ಪಡೆಯಲು ಇದ್ದ ನಿಯಮಗಳನ್ನು ಸಡಿಲ ಮಾಡಿ ಆರ್​ಬಿಐ ಅವಕಾಶ ಕೊಟ್ಟಿರುವುದು ಸರ್ಕಾರಕ್ಕೆ ಸಂಜೀವಿನಿ ಸಿಕ್ಕಂತಾಗಿದೆ.

ಹೊಸ ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್​ನಲ್ಲಿ ಲಾಕ್​ಡೌನ್ ಮುಂದುವರಿದಿರುವುದರಿಂದ ರಾಜ್ಯ ಸರ್ಕಾರದ ಸ್ವಂತ ತೆರಿಗೆ ಸಂಗ್ರಹವಾಗುವುದಿಲ್ಲ. ಆದರೆ ಬದ್ಧವೆಚ್ಚ ಮುಂದೂಡಲು ಸಾಧ್ಯವಿಲ್ಲದ ಕಾರಣ ಓವರ್ ಡ್ರಾಫ್ಟ್ ಹೊರತು ಬೇರೆ ಸಾಲದ ಮೂಲಗಳಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ಆರೋಗ್ಯ ಸೇವೆಗೇ ಹೆಚ್ಚಿನ ವೆಚ್ಚವಾಗಲಿದೆ.

ಸರ್ಕಾರದ ಆರ್ಥಿಕ ಇತಿಮಿತಿಯಲ್ಲಿ 25 ಸಾವಿರ ಕೋಟಿ ರೂ.ಗಳ ತನಕ ಓವರ್ ಡ್ರಾಫ್ಟ್ ಪಡೆಯಲು ಅವಕಾಶವಿದೆ. ಆರ್​ಬಿಐ ಸಹ ಇದೇ ಅಭಿಪ್ರಾಯ ನೀಡಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆಂದು ಮೂಲಗಳು ತಿಳಿಸಿವೆ.

ಓವರ್ ಡ್ರಾಫ್ಟ್ ಏಕೆ?: ಯಾವುದೇ ಸರ್ಕಾರ ತೆರಿಗೆ ಸಂಗ್ರಹಣೆಯಾಗದಿರುವಾಗ ಆರ್​ಬಿಐನಿಂದ ಓವರ್ ಡ್ರಾಫ್ಟ್ ಪಡೆದು ಸಾಮಾನ್ಯ ಬ್ಯಾಂಕ್​ನ ಬಡ್ಡಿದರದಂತೆ ನಿಗದಿತ ಅವಧಿಯಲ್ಲಿ ಮರುಪಾವತಿಸಬೇಕಾಗುತ್ತದೆ. ಆರ್ಥಿಕ ಸುಧಾರಣೆಗಳು ಜಾರಿಗೆ ಬರುವುದಕ್ಕೆ ಮುನ್ನ ಎಲ್ಲ ಸರ್ಕಾರಗಳು ಒ.ಡಿ. ಪಡೆಯುತ್ತಿದ್ದವು, ಆದರೆ 1990ರ ನಂತರ ಬಹುತೇಕ ನಿಂತಿದೆ. ಕೇಂದ್ರ ಸರ್ಕಾರ ಆರ್​ಬಿಐನಿಂದ ಹಣ ಪಡೆದರೆ ಮರುಪಾವತಿ ಇರುವುದಿಲ್ಲ, ಆದರೆ ರಾಜ್ಯ ಸರ್ಕಾರಗಳು ವಾಪಸ್ ಕಟ್ಟಬೇಕು.

ಸಂಪನ್ಮೂಲ ಕ್ರೋಡೀಕರಣ ಇಲ್ಲ: ಸಿಎಂ ಯಡಿಯೂರಪ್ಪ ಇತ್ತೀಚೆಗೆ ಕಾರ್ನರ್ ಸೈಟ್ ಹರಾಜು, ಸಹಕಾರ ಸಂಸ್ಥೆಗಳು ಮತ್ತು ಗೃಹ ನಿರ್ಮಾಣ ಸಂಘಗಳ ಬಡಾವಣೆ ಗಳಿಗೆ ಅನುಮತಿ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಯೋಜನೆ ರೂಪಿಸಿದ್ದರು. ಅಧಿಕಾರಿಗಳ ಪ್ರಕಾರ ಈ 2 ಮೂಲಗಳಿಂದ ಸಂಪನ್ಮೂಲ ಸಂಗ್ರಹ ಅಷ್ಟು ಸುಲಭವಿಲ್ಲ.

ಐಟಿ ಭಯ: ಮೂಲೆ ನಿವೇಶನಗಳನ್ನು ಮಾರುಕಟ್ಟೆ ಬೆಲೆಗೆ ಹರಾಜು ಹಾಕಬೇಕಾಗುತ್ತದೆ. ಖರೀದಿಸಿದವರು ಆದಾಯದ ಮೂಲ ತೋರಿಸಬೇಕಾಗುತ್ತದೆ; ಆದಾಯ ತೆರಿಗೆ ಇಲಾಖೆಗೆ ಲೆಕ್ಕ ಕೊಡಬೇಕಾಗುತ್ತದೆ. ಆದ್ದರಿಂದ ಬೆಂಗಳೂರಲ್ಲೇ ಇರುವ 12 ಸಾವಿರ ನಿವೇಶನಗಳನ್ನು ಖರೀದಿಸಲು ಎಷ್ಟು ಜನ ಮುಂದೆ ಬರಬಹುದು ಎಂಬ ಪ್ರಶ್ನೆ ಇದೆ. ಹಣಕಾಸು ಇಲಾಖೆ ಅಧಿಕಾರಿಗಳು ಈ ಮೂಲದಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆ ಇಟ್ಟುಕೊಂಡಿಲ್ಲ.

ರೇರಾ ಅಡ್ಡಿ: ಸಹಕಾರ ಸಂಘಗಳು, ಗೃಹ ನಿರ್ಮಾಣ ಸಂಘಗಳು ಬಡಾವಣೆಗಳ ನಿರ್ಮಾಣ ಅನುಮತಿಗೆ ಕಾಯುತ್ತಿದ್ದು, ಅನುಮತಿ ಕೊಟ್ಟರೆ ಆದಾಯ ಬರುತ್ತದೆ ಎಂಬ ವಾದವಿದೆ. ರೇರಾ ಕಾನೂನು ಈಗ ಬಲವಾಗಿದ್ದು, ಕೇಂದ್ರ ಸರ್ಕಾರ ಕಾನೂನು ಸಡಿಲ ಮಾಡಿದರಷ್ಟೇ ಅನುಮತಿ ನೀಡಿ ಸಂಪನ್ಮೂಲ ಸಂಗ್ರಹಿಸಬಹುದಾಗಿದೆ.

-ಠಿ;8800 ಕೋಟಿ ಬೇಕು!

ಪ್ರತಿ ತಿಂಗಳು ವೇತನ, ನಿವೃತ್ತಿ ವೇತನ, ಸಹಾಯಧನ, ಆಡಳಿತ ವೆಚ್ಚ ಹಾಗೂ ಬಡ್ಡಿ ಪಾವತಿಸಲು ಅಂದಾಜು 8800 ಕೋಟಿ ರೂ. ಅಗತ್ಯವಿದೆ. ಬಡ್ಡಿ ಪಾವತಿಯನ್ನು ಸಾಲ ಕೊಟ್ಟಿರುವ ಯಾವುದೇ ಸಂಸ್ಥೆ ಮುಂದೂಡುತ್ತಿಲ್ಲ. ಪ್ರತಿ ತಿಂಗಳು ಸರ್ಕಾರಕ್ಕೆ ಸ್ವಂತ ಸಂಪನ್ಮೂಲ, ಕೇಂದ್ರದ ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳಿಂದ 14,800 ಕೋಟಿ ರೂ.ಮೊತ್ತ ಲಭ್ಯವಾಗಬೇಕು.

ಬಾಂಡ್​ಗೆ ಒಲವು

ಓವರ್ ಡ್ರಾಫ್ಟ್ ಪಡೆಯುವುದರ ಜತೆಗೆ ಸಾರ್ವಜನಿಕ ಬಾಂಡ್​ಗಳ ಮೂಲಕವೂ ಸಂಪನ್ಮೂಲ ಕ್ರೋಡೀಕರಣಕ್ಕೆ ಅವಕಾಶಗಳಿವೆ. ಆದರೆ ಅಧಿಕಾರಿಗಳು ಆ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡುವುದಿಲ್ಲವೆಂಬುದು ಅನೇಕ ತಜ್ಞರ ಅಸಮಾಧಾನವಾಗಿದೆ.

1990ರಿಂದ ನಿಂತಿದ್ದ ಓವರ್ ಡ್ರಾಫ್ಟ್ ಸೌಲಭ್ಯವನ್ನು ಮತ್ತೆ ಆರಂಭಿಸಲಾಗಿದೆ. ಆರ್​ಬಿಐನ ನಿಯಮಗಳ ಪ್ರಕಾರ ನೀಡಲಾಗುತ್ತದೆ. ಹೆಚ್ಚುವರಿ ವೆಚ್ಚಗಳನ್ನು ಸರ್ಕಾರ ನಿರ್ವಹಿಸಲೇಬೇಕಾಗುತ್ತದೆ. ಪ್ರಸುಕ್ತ ವಿದ್ಯಮಾನಗಳನ್ನು ನೋಡಿದಾಗ ಒ.ಡಿ. ಅನಿವಾರ್ಯವಾಗಿದೆ. | ಡಾ. ಕೆ. ಗಾಯತ್ರಿ ಅರ್ಥಶಾಸ್ತ್ರಜ್ಞರು

ಬದ್ಧವೆಚ್ಚಗಳೆಷ್ಟು ? (ಕೋಟಿ ರೂ.ಗಳಲ್ಲಿ)

  • ವೇತನ 37291
  • ನಿವೃತ್ತ ವೇತನ 22211
  • ಸಹಾಯಧನ 199942
  • ಆಡಳಿತ ವೆಚ್ಚ 3133
  • ಬಡ್ಡಿ ಪಾವತಿ 22216
  • ಬದ್ದ ವೆಚ್ಚಕ್ಕೆ ತಿಂಗಳಿಗೆ ಬೇಕಾಗುವ ಮೊತ್ತ 8732.75

ಸಂಪನ್ಮೂಲ ಸಂಗ್ರಹ ಗುರಿ (ಕೋಟಿ ರೂ.ಗಳಲ್ಲಿ)

  • ವಾಣಿಜ್ಯ ತೆರಿಗೆ 82443
  • ಅಬಕಾರಿ ತೆರಿಗೆ 22700
  • ಮುದ್ರಾಂಕ ಮತ್ತು ನೋಂದಣಿ 12655
  • ಮೋಟಾರ್ ವಾಹನ 7115
  • ತೆರಿಗೆಯೇತರ 7767
  • ಕೇಂದ್ರದ ತೆರಿಗೆ ಪಾಲು 28591
  • ಕೇಂದ್ರ ಪುರಸ್ಕೃತ ಯೋಜನೆ 15454
  • ತಿಂಗಳಿನಲ್ಲಿ ಸಂಗ್ರಹವಾಗಬೇಕಾಗಿರುವ ರಾಜಸ್ವ 14724
ಓವರ್ ಡ್ರಾಫ್ಟ್ ಪಡೆಯುವುದಕ್ಕೆ ಆರ್​ಬಿಐ ಅನುಮತಿ ಸಿಕ್ಕಿದೆ. ಈ ಸಂದರ್ಭದಲ್ಲಿ ಅದು ಅನಿವಾರ್ಯವೂ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. | ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ

ಹಿಂದೆ ಪಡೆಯಲಾಗುತ್ತಿತ್ತು ಹಿಂದೆ ರಾಮಕೃಷ್ಣ ಹೆಗಡೆ ಸರ್ಕಾರದ ಅವಧಿಯಲ್ಲಿ ಸತತ ಬರ ಇದ್ದ ಕಾರಣ ವೇತನ ಹಾಗೂ ಇತರೆ ವೆಚ್ಚಕ್ಕೆ ಓವರ್ ಡ್ರಾಫ್ಟ್ ಪಡೆಯಲಾಗುತ್ತಿತ್ತು. ಒಮ್ಮೆ ಆರ್​ಬಿಐ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು. ವೀರಪ್ಪ ಮೊಯ್ಲಿ ಸರ್ಕಾರ ಪಿಯರ್​ಲೆಸ್ ಸಂಸ್ಥೆಯಿಂದ ಸಾಲ ಮಾಡಿತ್ತು.

ಆರೋಗ್ಯ ಸೇವೆಗಳು, ವೇತನ ಮೊದಲಾದವು ಗಳನ್ನು ಭರಿಸಲು ಒ.ಡಿ. ಪಡೆಯುವುದು ಅನಿವಾರ್ಯವಾಗಿದೆ. ಇದರ ಜತೆಗೆ ಸಾರ್ವಜನಿಕ ಬಾಂಡ್​ಗಳ ಬಗ್ಗೆಯೂ ಸರ್ಕಾರ ಆಲೋಚಿಸಬೇಕು. | ಪ್ರೊ. ಆರ್.ಎಸ್. ದೇಶಪಾಂಡೆ ಐಸೆಕ್ ನಿವೃತ್ತ ನಿರ್ದೇಶಕ