ಜಿಲ್ಲೆ

ಬಿಬಿಎಂಪಿ ವಿರುದ್ಧ ಆಕ್ರೋಶ

kumarvrl

ಬೆಂಗಳೂರು: ನಗರದಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ಗುರುತಿಸಲು ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ನ.25ರಂದು ನೀಡಿದ್ದ ಆದೇಶ ಪಾಲಿಸಲು ವಿಳಂಬ ಮಾಡುತ್ತಿರುವ ಬಿಬಿಎಂಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್ ಪೀಠ, ನ್ಯಾಯಾಂಗ ನಿಂದನೆ ಅಡಿಯಲ್ಲಿ ಏಕೆ ಕ್ರಮ ಜರುಗಿಸಬಾರದು ಎಂದು ವಿವರಣೆ ನೀಡುವಂತೆ ಪಾಲಿಕೆ ಆಯುಕ್ತರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ದಾಖಲಿಸಿ ಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. ಬಿಬಿಎಂಪಿ ಪರ ವಕೀಲರು, ಸರ್ವೆ ಕಾರ್ಯವನ್ನು 2020ರ ಏ.1ನಂತರ ನಡೆಸಲಾಗುವುದು ಎಂದು ತಿಳಿಸಿದಾಗ ತೀವ್ರ ಆಕ್ರೋಶಗೊಂಡ ಪೀಠ, ಅಕ್ರಮ ಕಟ್ಟಡಗಳ ಸರ್ವೆ ನಡೆಸಲು 2019ರ ನ.25ರಂದೇ ಆದೇಶಿಸಲಾಗಿದೆ. ತಕ್ಷಣವೇ ಸರ್ವೆ ಕಾರ್ಯ ಆರಂಭವಾಗಬೇಕು ಎಂದು ಕೋರ್ಟ್ ನಿರೀಕ್ಷಿಸಿತ್ತು. ಆದರೆ, ಈವರೆಗೂ ಕೋರ್ಟ್ ಆದೇಶವನ್ನೇ ಪಾಲನೆ ಮಾಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಏ.1ರ ನಂತರ ಸರ್ವೆ ಕಾರ್ಯ ಆರಂಭಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ ಎಂಬುದಕ್ಕೆ ಸೂಕ್ತ ವಿವರಣೆಯನ್ನೂ ನೀಡಿಲ್ಲ. ಕೋರ್ಟ್ ಆದೇಶ ಪಾಲಿಸದ ಪಾಲಿಕೆ ಆಯುಕ್ತರ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿ ವಿಚಾರಣೆಯ ವೇಳೆಯೂ ಒಂದಲ್ಲ ಒಂದು ನೆಪ ಹೇಳಿ, ಸರ್ವೆ ಕಾರ್ಯ ಆರಂಭಿಸಲು ಕಾಲಾವಕಾಶ ಪಡೆಯ ಲಾಗುತ್ತಿದೆ. ಆಯುಕ್ತರಿಗೆ ಜವಾಬ್ದಾರಿ ಇಲ್ಲವೇ ಎಂದು ಕುಟುಕಿತು.

ಈ ಪ್ರಕರಣವಷ್ಟೇ ಅಲ್ಲ, ಮತ್ತೆ ಕೆಲ ಪ್ರಕರಣಗಳಲ್ಲಿಯೂ ಬಿಬಿಎಂಪಿ ಕೋರ್ಟ್ ಆದೇಶ ಪಾಲಿಸಲು ವಿಫಲವಾಗಿದೆ. ಹಿಂದೆ ಒಮ್ಮೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸುವ ನಿರ್ಧಾರದಿಂದ ಕೋರ್ಟ್ ಹಿಂದೆ ಸರಿದಿತ್ತು. ಇಂಥ ಅಧಿಕಾರಿಯನ್ನು ಸಹಿಸಲು ಸಾಧ್ಯವಿಲ್ಲ. ಕಠಿಣ ಕ್ರಮ ಜರುಗಿಸದ ಹೊರತು ಕೋರ್ಟ್ ಆದೇಶಗಳು ಪಾಲನೆಯಾಗುವುದಿಲ್ಲ. ಆಯಯುಕ್ತರ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಲಾಗುವುದು ಎಂದು ತೀಕ್ಷ್ಣವಾಗಿ ನುಡಿಯಿತು. ಅಂತಿಮವಾಗಿ, ನ್ಯಾಯಾಂಗ ನಿಂದನೆ ಆರೋಪದಡಿ ಏಕೆ ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ಪಾಲಿಕೆ ಆಯುಕ್ತರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತು.

ಇದೇ ವೇಳೆ, ಸರ್ವೆ ಕಾರ್ಯ ನಡೆಸಲು ಅಗತ್ಯ ಸಿಬ್ಬಂದಿ ಒದಗಿಸಲು ಬಿಬಿಎಂಪಿ ಮಾಡಿರುವ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.

ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸಲು ಹೊಸದಾಗಿ ಸಮೀಕ್ಷೆ ನಡೆಸಿ, ಹಂತಹಂತವಾಗಿ ಅವುಗಳನ್ನು ತೆರವುಗೊಳಿಸಬೇಕು. ಅದಕ್ಕೂ ಮುನ್ನ ಸಮೀಕ್ಷೆ ಕಾರ್ಯವಿಧಾನದ ಬಗ್ಗೆ ಕಾಲಮಿತಿಯನ್ನೊಳಗೊಂಡ ವೇಳಾಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ.25ರಂದು ಹೈಕೋರ್ಟ್ ಆದೇಶಿಸಿತ್ತು.