ಹರೀಶ್ ಬೇಲೂರು ಬೆಂಗಳೂರು
ಸಾಕಷ್ಟು ಬಾರಿ ಅವಕಾಶ ಕೊಟ್ಟರೂ ದಂಡ ಪಾವತಿಗೆ ವಿಫಲರಾದ ಕಲ್ಲುಗಣಿ ಗುತ್ತಿಗೆದಾರರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ದಂಡ ಕಟ್ಟಲು "ಒಂದು ಬಾರಿ ಪರಿಹಾರ' (ಒನ್ ಟೈಮ್ ಸೆಟಲ್ಮೆಂಟ್) ಯೋಜನೆ ಜಾರಿಗೆ ಬರಲಿದೆ. ಯೋಜನೆಯ ರೂಪುರೇಷಗಳನ್ನು ಈಗಾಗಲೇ ಸಿದ್ಧಪಡಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಜಾರಿಗೆ ತರಲಿದೆ. ಒಟಿಎಸ್ ವ್ಯವಸ್ಥೆಯಿಂದ ಸರ್ಕಾರದ ಬೊಕ್ಕಸಕ್ಕೆ 1,500 ಕೋಟಿ ರೂ.ಆದಾಯ ಹರಿದು ಬರುವ ಅಂದಾಜಿಸಲಾಗಿದೆ.
ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಸಂಚಾರಿ ನಿಯಮ ಉಲ್ಲಂನೆ ದಂಡ ಕಟ್ಟಲು ವಾಹನ ಸವಾರರಿಗೆ "ಒಂದು ಬಾರಿ ಪರಿಹಾರ'(ಒಟಿಎಸ್) ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಅವಕಾಶ ಕೊಟ್ಟಿತ್ತು. ಈ ಕ್ರಮದಿಂದ ರಾಜ್ಯಾದ್ಯಂತ ಲಾಂತರ ಸವಾರರು ರಿಯಾಯಿತಿ ದರದಲ್ಲಿ ದಂಡ ಕಟ್ಟಿ ತಮ್ಮ ಕೇಸ್ಗಳನ್ನು ಇತ್ಯರ್ಥ ಪಡಿಸಿಕೊಂಡಿದ್ದರು. ಸರ್ಕಾರಕ್ಕೂ ಕೋಟ್ಯಂತರ ಆದಾಯ ಬಂದಿತ್ತು. ಅದೇ ಮಾದರಿಯ ಒಟಿಎಸ್ ವ್ಯವಸ್ಥೆಯನ್ನು ಇಲಾಖೆ ಅನುಷ್ಠಾನಕ್ಕೆ ತರಲಿದೆ. ಇದರಿಂದಾಗಿ ಹಲವು ವರ್ಷಗಳಿಂದ ಕೋಟ್ಯಂತರ ರೂ.ದಂಡದ ಮೊತ್ತ ಕಟ್ಟಲು ಸಾಧ್ಯವಾಗದ ಕಲ್ಲುಗಣಿ ಗುತ್ತಿಗೆದಾರರಿಗೆ ರಿಲೀಫ್ ಸಿಗುವಂತಾಗಲಿದೆ.
2011ರ ಹಿಂದೆ ರಾಜ್ಯದಲ್ಲಿ ಕಾನೂನುಬದ್ಧ ಗಣಿಗಾರಿಕೆ ನಡೆಸುವುದಕ್ಕೆ ಸೂಕ್ತ ನಿಯಮ ಇರಲಿಲ್ಲ. ಹಿಂದೆ ಮ್ಯಾನ್ಯುವಲ್ ಮೂಲಕ ಸರ್ವೇ ಮಾಡಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗುತ್ತಿತ್ತು. 5 ಎಕರೆ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆಯುವ ಗುತ್ತಿಗೆದಾರರು, ಹತ್ತಾರು ಎಕರೆಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ವರ್ಷದಲ್ಲಿ ಇಷ್ಟೇ ಪ್ರಮಾಣದಲ್ಲಿ ಕಲ್ಲು, ಅದಿರು, ಮರಳು ಸೇರಿ ಖನಿಜ ಮತ್ತು ಉಪ ಖನಿಜಗಳನ್ನು ತೆಗೆಯಬೇಕೆಂಬ ನಿಯಮ ವಿಧಿಸಲಾಗಿದ್ದರೂ ಯದ್ವಾತದ್ವಾ ಗಣಿಗಾರಿಕೆ ನಡೆಸಿ ಅಕ್ರಮವಾಗಿ ಕೋಟ್ಯಂತರ ರೂ.ಆದಾಯ ಗಳಿಸಿದ್ದರು. ಸರ್ಕಾರಕ್ಕೆ ಸಮರ್ಪಕವಾಗಿ ರಾಯಲ್ಟಿ ಕಟ್ಟದೆ ವಂಚಿಸಿದ್ದರು.ಪರವಾನಗಿ ನವೀಕರಣ ಮಾಡಿಕೊಳ್ಳದೆ ಗಣಿಗಾರಿಕೆ ನಡೆಸುತ್ತಿದ್ದರು.ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಶಿವಮೊಗ್ಗ, ಮಂಡ್ಯ, ಮೈಸೂರು, ದಣ ಕನ್ನಡ, ಬಳ್ಳಾರಿ, ತುಮಕೂರು ಮತ್ತು ವಿಜಯಪುರ ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಕ್ರಮ ಕಲ್ಲುಗಣಿಗಾರಿಕೆ ನಡೆದಿವೆ ಎನ್ನಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರತಿ ವರ್ಷ ಅಕ್ರಮ ಗಣಿಗಾರಿಕೆ, ಸಾಗಾಣೆ,ದಾಸ್ತಾನು ಸಂಬಂಧ ನೂರಾರು ಪ್ರಕರಣಗಳು ದಾಖಲಾಗಿತ್ತು. ನಿಯಮ ಉಲ್ಲಂಘಿಸಿದ ಗಣಿ ಗುತ್ತಿಗೆದಾರರ ವಿರುದ್ಧ ಇಲಾಖೆ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದರು. ಆದರೆ, ಹಲವು ವರ್ಷಗಳಿಂದ ದಂಡ ಕಟ್ಟದೆ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ.
ಅಕ್ರಮಕ್ಕೆ ಕಡಿವಾಣ:ಅಕ್ರಮ ಗಣಿಗಾರಿಕೆ ತಡೆಗೆ ಈಗಾಗಲೇ ಇಲಾಖೆ, ರಾಜ್ಯಾದ್ಯಂತ ಡ್ರೋನ್ ಸರ್ವೇ ನಡೆಸುತ್ತಿದೆ. ಸರ್ಕಾರದ ಅಧೀನದ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್ಆರ್ಎಸ್ಎಸಿ) ಮೂಲಕ ಇಲಾಖೆ ಸರ್ವೇ ಕಾರ್ಯ ಕೈಗೆತ್ತಿಕೊಂಡಿದೆ. ಇದರಿಂದ ರಾಜ್ಯದ ಯಾವುದೇ ಮೂಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದರೆ ಮಾಹಿತಿ ದೊರೆಯಲಿದೆ. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ಸುಲಭವಾಗಲಿದೆ. ನಿಗದಿಪಡಿಸಿದ ಜಾಗದಲ್ಲೇ ಗಣಿಗಾರಿಕೆ ನಡೆಸಬೇಕು, ಸರ್ಕಾರಕ್ಕೆ ರಾಯಲ್ಟಿ ವಂಚಿಸಲು ಆಗೋದಿಲ್ಲ. ಯಾವುದು ಅನಧಿಕೃತ, ಅಧಿಕೃತ ಎಂಬುದು ಪತ್ತೆಯಾಗಲಿದೆ, ನಿಗದಿಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಕಲ್ಲು, ಮರಳು ತೆಗೆದರೆ ಸಿಕ್ಕಿ ಬೀಳುವ ಹತೆಗೆ ಒಂದು ಪರವಾನಗಿ ಪಡೆದು ಮತ್ತೊಂದು ಕಡೆ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ಇರುವುದಿಲ್ಲ. ಒಂದು ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಕಲ್ಲು, ಮರಳು ಮತ್ತು ಅದಿರು ಸಿಗಲಿದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಲಿದೆ. ಭವಿಷ್ಯದಲ್ಲಿ ಡ್ರೋನ್ ಜಿಪಿಎಸ್ ಮೂಲಕ ದಂಡ ಹಾಕಲು ಅನುಕೂಲವಾಗಲಿದೆ.
2,802 ಅಧಿಕೃತ ಕಲ್ಲು ಗಣಿಗಾರಿಕೆ: ರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ 2,802 ಅಧಿಕೃತ ಕಲ್ಲು ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. 70 ರೂ.ರಾಜಧನ, 21 ರೂ. ಜಿಲ್ಲಾ ನಿರ್ವಹಣೆ ನಿಧಿ ಸೇರಿ ಒಟ್ಟು 91 ರೂ. ಪ್ರತಿ ಟನ್ ಕಲ್ಲುಗೆ ಸರ್ಕಾರಕ್ಕೆ ಶುಲ್ಕ ಕಟ್ಟಲಾಗುತ್ತಿದೆ. ಗಣಿಗಾರಿಕೆ ಅರಣ್ಯ ಸಂರಕ್ಷಣೆ ಕಾಯ್ದೆ 1980 2(1) ಮತ್ತು 2(3) ಹಾಗೂ ಅರಣ್ಯ ಸಂರಕ್ಷಣಾ ಕಾನೂನು 2003 (6) ಹಾಗೂ ಗಣಿಗಾರಿಕೆ ಕೇಂದ್ರ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆದ ಬಳಿಕ ಗುತ್ತಿಗೆ ಆಧಾರದಲ್ಲಿ ರ್ನಿದಿಷ್ಟ (20 ವರ್ಷ ಗುತ್ತಿಗೆ) ಹಾಗೂ ರ್ನಿದಿಷ್ಟವಲ್ಲದ (30 ವರ್ಷ ಗುತ್ತಿಗೆ) ಎಂದು 2 ವಿಧದಲ್ಲಿ ಅನುಮತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 13ಸಾವಿರ ಎಕರೆ ಪ್ರದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳಿಂದ ಪ್ರತಿ ನಿತ್ಯ ಅಂದಾಜು 12 ಲಕ್ಷ ಟನ್ ಜಲ್ಲಿ ಕಲ್ಲು, ಎಂ.ಸ್ಟಾ$ಂಡ್ ಉತ್ಪಾದನೆಯಾಗುತ್ತಿದೆ.
ಒಟಿಎಸ್ನಿಂದ ಅನುಕೂಲಗಳೇನು?
* ಜಲ್ಲಿಕಲ್ಲು, ಸೈಜ್ಗಲ್ಲು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು ಗಣಿಗಾರಿಕೆ ನಡೆಸುವ ಕಲ್ಲು ಗುತ್ತಿಗೆದಾರರಿಗೆ ಮಾತ್ರ ಒಟಿಎಸ್ ಅನ್ವಯ
* ಮರಳು, ಅದಿರು ಗಣಿಗಾರಿಕೆ ನಡೆಸುವವರಿಗೆ ಅನ್ವಯವಾಗಲ್ಲ
* 3 ಕೋಟಿ ರೂ.ದಂಡ ಇದ್ದರೆ 80 ಲಕ್ಷ ರೂ.ಗೆ ಇಳಿಕೆ
* 2017ರಲ್ಲೇ ಡ್ರೋನ್ ಜಿಪಿಎಸ್ ಮೂಲಕ ಸರ್ವೇ ನಡೆಸಿ ಎಷ್ಟು ಕಲ್ಲು ತೆಗೆದಿರುವ ಬಗ್ಗೆ ಅಂಕಿಅಂಶ ಸಂಗ್ರಹಿಸಿರುವ ಅಧಿಕಾರಿಗಳು
* ಕೋರ್ಟ್ ಸೂಚನೆ ಮೇರೆಗೆ ಕಲ್ಲುಗಣಿ ಗುತ್ತಿಗೆದಾರರಿಗೆ ಅವಕಾಶ ಕೊಟ್ಟ ಇಲಾಖೆ
* ಅಂಕಿಅಂಶಗಳ ಸಂಗ್ರಹಣೆ, ಸರ್ವೇ ಕಾರ್ಯ ಮುಗಿದ ಬಳಿಕ ಯೋಜನೆ ಜಾರಿ
* ಅಕ್ರಮಕ್ಕೆ ಕಡಿವಾಣ ಹಾಕಲು ದಿಟ್ಟಹೆಜ್ಜೆ ಇಟ್ಟ ಇಲಾಖೆ
* ನಿಗದಿಗಿಂತ ಅರ್ಧ ಕೆಜಿ ಹೆಚ್ಚು ಕಲ್ಲು ತೆಗೆದರೆ ಪತ್ತೆ
* ರಾಜಧನ ಸೋರಿಕೆಗೆ ತಡೆ