ಬೆಳ್ತಂಗಡಿ: ಎಸ್‌ಡಿಎಂ ವಿದ್ಯಾಸಂಸ್ಥೆ ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ಸಾವಿರಾರು ವಿದ್ಯಾರ್ಥಿಗಳ ನಿರೀಕ್ಷೆ ಹುಸಿಗೊಳಿಸದೆ ಅವರ ಶೈಕ್ಷಣಿಕ ಬೆಳವಣಿಗೆ, ಕೌಶಲ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ವಿಪುಲ ಅವಕಾಶ ಸಂಸ್ಥೆ ನೀಡುತ್ತಾ ಬಂದಿದೆ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಹೇಳಿದರು.
ಸೋಮವಾರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮೂರು ದಿನಗಳ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಸ್‌ಡಿಎಂ ಸಂಸ್ಥೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. ಒಳ್ಳೆಯ ಮನೋಧರ್ಮ, ಜ್ಞಾನ ಹಾಗೂ ಕೌಶಲ ಜತೆ ವಿನಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಗುರಿಯತ್ತ ಗಮನ ಹರಿಸಿ ಎಂದರು.
ಎನ್.ಎಸ್.ಎಸ್, ಎನ್.ಸಿ.ಸಿ, ಕಲಾ ಕೇಂದ್ರ, ಕ್ರೀಡಾಂಗಣ, ಗ್ರಂಥಾಲಯ ಸಹಿತ ಕಾಲೇಜಿನ ಚಟುವಟಿಕೆ ಹಾಗೂ ಸಾಧನೆಗಳ ಕಿರು ಪರಿಚಯ ಮಾಡಿಕೊಟ್ಟರು. ಕಾಲೇಜಿನ ಆಡಳಿತ ಮತ್ತು ಪರೀಕ್ಷಾಂಗ ಕುಲಸಚಿವರು, ವಿವಿಧ ವಿಭಾಗದ ಡೀನ್‌ಗಳು, ಉಪನ್ಯಾಸಕರು, 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಪ್ರೊ.ಎಸ್.ಎನ್.ಕಾಕತ್ಕರ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ನಿರೂಪಿಸಿದರು.