ಜಿಲ್ಲೆ

ನಾಳೆಯಿಂದ 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ : ಬಹುತೇಕ ಪ್ರದೇಶಗಳಲ್ಲಿ ಮುಂದುವರಿದ ಮಳೆ

ಹರೀಶ್​​ ಕೆ.ಸಿ.

ಬೆಂಗಳೂರು: ಕರಾವಳಿ, ಮಲೆನಾಡು,ದಕ್ಷಿಣ ಕರ್ನಾಟಕ ಸೇರಿ ರಾಜ್ಯದ ಇತರೆ ಭಾಗಗಳಲ್ಲಿ ಸೋಮವಾರವೂ ಧಾರಾಕಾರವಾಗಿ ಮಳೆ ಸುರಿದಿದೆ. ಮುಂದಿನ ಆರೇಳು ದಿನ ಈ ಭಾಗಗಳಲ್ಲಿ ಇನ್ನಷ್ಟು ತೀವ್ರವಾಗಿ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಕಾರವಾರ ವೀಕ್ಷಣಾಲಯ ಕುಮಟಾ, ಅಂಕೋಲಾ, ಕದ್ರಾ, ಉಡುಪಿಯ ಸಿದ್ದಾಪುರ, ಉಡುಪಿ ಕೋಟ, ಕುಂದಾಪುರ ಮತ್ತು ಶಿವಮೊಗ್ಗದ ಆಗುಂಬೆಯಲ್ಲಿ 100 ಮಿಮೀವರೆಗೆ ಮಳೆಯಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ,ಕೊಡಗು ಮತ್ತು ಶಿವಮೊಗ್ಗದಲ್ಲಿ ಜು.22ರಿಂದ ಜು.28ರವರೆಗೆ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಕೊಟ್ಟಿದೆ. ಕರಾವಳಿಯ ಕೆಲ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಜೊತೆಗೆ ಗಾಳಿ ವೇಗವೂ ಹೆಚ್ಚಿರಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಚಾಮರಾಜನಗರ, ಮಂಡ್ಯ, ಮೈಸೂರಲ್ಲಿ ಜು.22ರಂದು ಹಾಗೂ ಬೆಳಗಾವಿ, ಧಾರವಾಡ, ಕಲಬುರಗಿ,ಬೀದರ್‌ನಲ್ಲಿ ಜು.24ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಈ ಅವಧಿಯಲ್ಲಿ ಸಾಧಾರಣ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26 ಮತ್ತು 19 ಡಿ.ಸೆ. ಇರಲಿದೆ.