ಪಡುಬಿದ್ರಿ: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್) ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕ ಪ್ರದೇಶದಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಾಣ ಆದೇಶ ತಕ್ಷಣ ರದ್ದುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಳಗ) ಆಗ್ರಹಿಸುತ್ತದೆ ಎಂದು ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ತಿಳಿಸಿದರು.
ಈ ಹೆದ್ದಾರಿಗೆ ಟೋಲ್ ಕೇಂದ್ರ ತೆರೆಯಲು ಹಿಂದೆ ಹಲವು ಬಾರಿ ಪ್ರಯತ್ನ ನಡೆಸಲಾಗಿತ್ತು, ಆದರೆ ಸಾರ್ವಜನಿಕರು ಹಾಗೂ ಸಂಘಟನೆಗಳ ವಿರೋಧದಿಂದ ಅದನ್ನು ವಿಫಲಗೊಳಿಸಲಾಗಿತ್ತು. ಸಾರ್ವಜನಿಕ ವಿರೋಧದ ನಡುವೆಯೂ ಇದೀಗ ಮತ್ತೆ ಟೋಲ್ ಸಂಗ್ರಹಕ್ಕೆ ಆ.16ಕ್ಕೆ ದಿನಾಂಕ ನಿಗದಿಗೊಳಿಸಿ ಆದೇಶ ಹೊರಡಿಸಲಾಗಿದೆ. ಮುಂದಿನ 10 ದಿನಗಳೊಳಗೆ ಆದೇಶ ರದ್ದುಪಡಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕಾಪುವಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಈ ವಿಚಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಶೀಘ್ರ ಪರಿಹಾರ ಒದಗಿಸಬೇಕು. ಟೋಲ್ ಹೆಸರಲ್ಲಿ ಜನರನ್ನು ಲೂಟಿ ಮಾಡುವುದನ್ನು ಕೂಡಲೇ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು. ಸಂಘಟನೆ ಪ್ರಮುಖರಾದ ಸೈಯ್ಯದ್ ನಿಜಾಮುದ್ದೀನ್, ಸುಧೀರ್ ಪೂಜಾರಿ, ಎಂ.ಎಸ್.ಶಾಫಿ, ಜ್ಯೋತಿ ಮೆನನ್, ಶಂಕರ್ ಕಂಚಿನಡ್ಕ ಉಪಸ್ಥಿತರಿದ್ದರು.