ಭಟ್ಕಳ: ನಗರಸಭೆ ರಚಿಸಿ ಅದಕ್ಕೆ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯಿತಿ ಸೇರಿಸುವುದನ್ನು ವಿರೋಸಿ ಜಾಲಿ ಭಾಗದ ನಾಗರಿಕರು ಬುಧವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಜಾಲಿ ಗ್ರಾಮ ಪಂಚಾಯಿತಿಯನ್ನು ಏಳು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ತೆರಿಗೆ ಏರಿಕೆಯಾಗಿದ್ದು ಜನಸಾಮಾನ್ಯರ ಮೇಲೆ ಹೊರೆ ಬಿದ್ದಿದೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಏನೂ ಪ್ರಯೋಜನವಾಗಿಲ್ಲ. ಜಾಲಿಯಲ್ಲಿ ಹೆಚ್ಚಿನ ಜನ ಬಡವರಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಗಳೇ ಹೆಚ್ಚಿವೆ. ನಗರಸಭೆ ಆದರೆ ರಿಯಲ್ ಎಸ್ಟೇಟ್ ದಂಧೆ ಹೆಚ್ಚಲಿದೆ. ಕೃಷಿ ಭೂಮಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಈಗಾಗಲೇ ನಾವು ಯಾವುದೇ ಸೌಲಭ್ಯವಿಲ್ಲದೇ ಅಧಿಕ ಕರ ನೀಡುತ್ತಿದ್ದೇವೆ. ಮತ್ತೆ ಯಾವುದೇ ಕಾರಣಕ್ಕೂ ಜಾಲಿಯನ್ನು ಭಟ್ಕಳ ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದು ಬೇಡ ಎಂದು ಒತ್ತಾಯಿಸಿದರು. ಜಾಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಜನಾಭಿಪ್ರಾಯ ಕೇಳದೇ ನಗರಸಭೆ ಮಾಡುವ ಹುನ್ನಾರ ನಡೆಸಲಾಗಿದೆ. ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನಗರಸಭೆ ಮಾಡಲು ಮುಂದಾದಲ್ಲಿ ತೀವ್ರ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಸ್ಥಳಕ್ಕಾಗಮಿಸಿದ ಆಡಳಿತಾಽಕಾರಿ ಮತ್ತು ತಹಸೀಲ್ದಾರ್ ತಿಪ್ಪೇಸ್ವಾಮಿ ಅವರಿಗೂ ಇದೇ ವಿಷಯವನ್ನು ಸ್ಥಳೀಯರು ಮನವರಿಕೆ ಮಾಡಿದರು.
ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ, ಹೆಬಳೆ ಗ್ರಾಪಂ ಸೇರಿಸಿ ಭಟ್ಕಳ ನಗರಸಭೆ ರಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ ಅವರಿಗೆ ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ. ಅದನ್ನಾಧರಿಸಿ ಸರ್ಕಾರವು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಭಿಪ್ರಾಯ ಕೇಳಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿದ್ದು, ಅದಕ್ಕೀಗ ಪರ,ವಿರೋಧ ವ್ಯಕ್ತವಾಗುತ್ತಿದೆ. ಒಂದು ಸಮುದಾಯದ ಓಲೈಕೆಗಾಗಿ ಸಚಿವರು ಭಟ್ಕಳ ನಗರಸಭೆ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಆಕ್ಷೇಪಿಸಿದೆ. ಇನ್ನೊಂದೆಡೆ ಜಾಲಿ ನಾಗರಿಕರಿಂದ ವಿರೋಧ ವ್ಯಕ್ತವಾಗಿದೆ. 2011 ರ ಜನಗಣತಿಯಂತೆ ಭಟ್ಕಳದಲ್ಲಿ 32, ಜಾಲಿಯಲ್ಲಿ 19 ಹಾಗೂ ಹೆಬಳೆಯಲ್ಲಿ 19 ಸೇರಿ 75 ಸಾವಿರ ಜನಸಂಖ್ಯೆಯಾಗಲಿದ್ದು, ನಗರಸಭೆ ಮಾಡಲು ಸೂಕ್ತವಾಗಿದೆ ಎಂಬುದು ವೈದ್ಯ ಅವರ ಅಭಿಪ್ರಾಯ.
ಇದನ್ನೂ ಓದಿ: ನಿಯೋಜಿತ ಶಿಷ್ಯ ನಾಗರಾಜ ಭಟ್ಟ ಪುರ ಪ್ರವೇಶ