ಬಳ್ಳಾರಿ ಡಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶೆ ಕೆ.ಜಿ.ಶಾಂತಿ ಉದ್ಘಾಟಿಸಿದರು. ಡಿಸಿ ಪ್ರಶಾಂತಕುಮಾರ ಮಿಶ್ರಾ, ನ್ಯಾಯಾಧೀಶ ಎನ್.ರಾಜೇಶ ಹೊಸಮನೆ, ಎಡಿಸಿ ಮಹಮ್ಮದ್ ಜುಬೇರ್, ಎಸಿ ಪ್ರಮೋದ, ತಹಸೀಲ್ದಾರ್ ಗುರುರಾಜ ಇತರರಿದ್ದರು. 
ಜಿಲ್ಲೆ

ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಅವಕಾಶ

ಗಾಯತ್ರಿ ಮಾಲಿಪಾಟೀಲ್

ಬಳ್ಳಾರಿ: ದೇಶದ ಪ್ರಗತಿಗೆ ಉತ್ತಮ ನಾಯಕನ ಆಯ್ಕೆ ಅಗತ್ಯವಾಗಿದ್ದು, ಆಸೆ ಆಮಿಷಕ್ಕೆ ಒಳಗಾಗದೆ ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ಚುನಾವಣೆಗಳಲ್ಲಿ ಹಿರಿಯರೆಲ್ಲರೂ ಹಬ್ಬದಂತೆ ಮತದಾನದಲ್ಲಿ ಪಾಲ್ಗೊಂಡು ಮತದಾನ ಮಾಡುತ್ತಿದ್ದರು.

ಪ್ರಜಾಪ್ರಭುತ್ವದಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂವಿಧಾನ ಮತದಾನ ಹಕ್ಕು ನೀಡಿದೆ. ಚುನಾವಣೆಗಳು ಹಬ್ಬಗಳಿದ್ದಂತೆ ಎಲ್ಲರೂ ತಪ್ಪದೇ ಭಾಗವಹಿಸಬೇಕು ಎಂದರು.

ಡಿಸಿ ಪ್ರಶಾಂತಕುಮಾರ ಮಿಶ್ರಾ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ಹಕ್ಕು ಚಲಾಯಿಸಬೇಕು. ಗೆಳೆಯರಿಗೆ, ಅಕ್ಕ-ಪಕ್ಕದವರಿಗೆ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ದೇಶ ಸದೃಢವಾಗಿರಲು ಚುನಾವಣಾ ಆಯೋಗದ ಆಡಳಿತ ಕಾರ್ಯವೈಖರಿ ಕಾರಣವಾಗಿದೆ. ಭಾರತದಲ್ಲಿ ಅತಿಹೆಚ್ಚು ಯುವ ಮತದಾರರಿದ್ದಾರೆ. ಹಾಗಾಗಿ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.

ನಂತರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಬ್ಯೂಟಿಫುಲ್ ಬಳ್ಳಾರಿ ಎಂಬ ಶೀರ್ಷಿಕೆಯಡಿ ಮುದ್ರಿಸಲಾದ ಕಾಫೀ ಟೇಬಲ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಬಳಿಕ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕುರಿತು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಲಾಯಿತು. ನೂತನ ನೋಂದಾಯಿತ ಮತದಾರರಿಗೆ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.