ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು.  
ಜಿಲ್ಲೆ

ಸಾಲಿಗ್ರಾಮದಲ್ಲಿ ಆಪರೇಷನ್ ಫುಟ್‌ಪಾತ್!

Karthika K.S

ವಿಜಯವಾಣಿ ಸುದ್ದಿಜಾಲ ಕೋಟ

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಒಳಪೇಟೆ ಅಭಿವೃದ್ಧಿಗೊಳ್ಳದೆ ಹಾಗೇ ಉಳಿದುಕೊಂಡಿದೆ. ಸರ್ಕಾರಿ ಜಾಗದಲ್ಲಿರುವ ಅಂಗಡಿಗಳನ್ನು ಆಪರೇಷನ್ ಫುಟ್‌ಪಾತ್ ಯೋಜನೆ ಅನ್ವಯ ತೆರವುಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಸೂಚನೆ ನೀಡಿದರು.

ಮಂಗಳವಾರ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಒತ್ತುವರಿ ವಿಚಾರದಲ್ಲಿ ವಿಪಕ್ಷ ನಾಯಕ ಶ್ರೀನಿವಾಸ ಅಮೀನ್ ಹಾಗೂ ರತ್ನಾ ನಾಗರಾಜ್ ಗಾಣಿಗ ನಡುವೆ ವಾಕ್ಸಮರ ನಡೆಯಿತು. ಆಡಳಿತ ಪಕ್ಷದ ರಾಜು ಪೂಜಾರಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಿಸಿದರು.

ಪಟ್ಟಣದ ಆಂಜನೇಯ ದೇಗುಲದಿಂದ ಗುರುನರಸಿಂಹ ದೇಗುಲದ ಒಳ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ರಾಜು ಪೂಜಾರಿ ಸಭೆಯಲ್ಲಿ ಪ್ರಸ್ತಾಪಿಸಿದರು. ಮುಖ್ಯಾಧಿಕಾರಿ ಉತ್ತರಿಸಿ, ಪೋಲಿಸರ ಸಮ್ಮುಖದಲ್ಲಿ ನಿಯಮ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸಿಆರ್‌ಜಡ್ ನಿಯಮಗಳಲ್ಲಿ ಅನುಸರಿಸುತ್ತಿರುವ ತಾರತಮ್ಯ ಕುರಿತು ಸದಸ್ಯ ಪುನೀತ್ ಅಸಮಾಧಾನ ಹೊರಹಾಕಿದರು. ಸಿಆರ್‌ಜಡ್ ಇಲಾಖೆ ಉಪನಿರ್ದೇಶಕ ಡಾ.ರಾಮಲಿಂಗ ಪ್ರತಿಕ್ರಿಯಿಸಿ, ಇಲಾಖೆಯಲ್ಲಿ ಯಾವುದೇ ತಾರತಮ್ಯ ನಡೆಯುತ್ತಿಲ್ಲ. ಜನರು ಕಚೇರಿಗೆ ಖುದ್ದಾಗಿ ಬಂದು ಸಂಶಯ ಬಗೆಹರಿಸಿಕೊಳ್ಳಬಹುದು ಎಂದರು.

ರಸ್ತೆ ಕೆಳದರ್ಜೆಗಿಳಿಸಲು ಆಗ್ರಹ: ಸಾಲಿಗ್ರಾಮ-ಕಾವಡಿ ಹಾಗೂ ಸಾಲಿಗ್ರಾಮ-ಪಾರಂಪಳ್ಳಿ ರಸ್ತೆಗಳು ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿದ್ದು, ಈ ರಸ್ತೆಗಳಿಗೆ ಮೇಲ್ದರ್ಜೆಗೇರುವ ಆರ್ಹತೆ, ಅಗತ್ಯತೆಗಳಿಲ್ಲ. ಶೀಘ್ರವೇ ಈ ರಸ್ತೆಗಳನ್ನು ಪ.ಪಂ.ರಸ್ತೆಯಾಗಿ ಕೆಳದರ್ಜೆಗಿಳಿಸಬೇಕು ಎಂಬ ಆಗ್ರಹ ಕೇಳಿಬಂತು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಪಿಡಬ್ಲುೃಡಿ ಅಧಿಕಾರಿ ಮಂಜುನಾಥ್ ಹೇಳಿದರು.

ಮಲತ್ಯಾಜ್ಯ ಸಂಸ್ಕರಣಾ ಘಟಕ: ಕಾವಡಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಸ್ಥಳೀಯರಿಂದ ವಿರೋಧವಿದ್ದು, ಮುಖ್ಯಾಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸದಸ್ಯ ಶ್ರೀನಿವಾಸ ಅಮೀನ್ ಆಗ್ರಹಿಸಿದರು.

ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಪ್ರತಿಕ್ರಿಯಿಸಿ, ಮಲತ್ಯಾಜ್ಯ ಸಂಸ್ಕರಣಾ ಘಟಕ ಎಲ್ಲ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ನಿರ್ಮಾಣಗೊಳ್ಳಬೇಕಿದ್ದು, ಜಿಲ್ಲಾಡಳಿತವೇ ಸ್ಥಳ ನಿಗದಿಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವಿದೆ. ಹೀಗಾಗಿ ಜಿಲ್ಲಾಕಾರಿಗಳು ಪರಿಶೀಲನೆ ನಡೆಸಿ ಪ.ಪಂ. ವ್ಯಾಪ್ತಿಯಲ್ಲಿ ಸೂಕ್ತ ಸ್ಥಳವಿಲ್ಲದ ಕಾರಣ ಕಾವಡಿ ಗ್ರಾಮದಲ್ಲಿ ಜಾಗ ಗುರುತಿಸಿದ್ದಾರೆ. ವೈಜ್ಞಾನಿಕವಾಗಿ ಮಲತ್ಯಾಜ್ಯ ಸಂಸ್ಕರಣೆ ನಡೆಯಲಿದೆ ಎಂದು ಭರವಸೆ ನೀಡಿದರು.

ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ನೀಡಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸದಸ್ಯರು ಉಪಸ್ಥಿತರಿದ್ದರು.

ಮಾಲೀಕರ ಸಭೆ ಕರೆದು ಅಂಗಡಿ ತೆರವಿಗೆ ಕ್ರಮ

ಫುಟ್ಬಾತ್ ಜಾಗ ಒತ್ತುವರಿ ಮಾಡಿ ನಿರ್ಮಾಣಗೊಂಡಿರುವ ಅಂಗಡಿಗಳ ತೆರವು ಕಾರ್ಯ ನಡೆಯಲಿದ್ದು, ಅಂಥ ಅಂಗಡಿಗಳ ಪಟ್ಟಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ವಾಚಿಸಿದರು. ಮುಖ್ಯಾಧಿಕಾರಿ ಹಾಗೂ ಕೌನ್ಸಿಲರ್ ಸಮ್ಮುಖದಲ್ಲಿ ಅಂಗಡಿ ಮಾಲೀಕರ ವಿಶೇಷ ಸಭೆ ಕರೆದು ಫುಟ್‌ಪಾತ್‌ನಲ್ಲಿರುವ ಅಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.