ಬೆಂಗಳೂರು: ಕರೊನಾ ಲಾಕ್ಡೌನ್ ಅವಧಿಯಲ್ಲಿ ಗುಟ್ಖಾ ಸಿಗರೇಟ್ ಮಾರಾಟ ನಿಷೇಧಿಸಲ್ಪಟ್ಟಿದೆ. ಆದಾಗ್ಯೂ ಅನೇಕರು ಗುಟ್ಖಾ, ಸಿಗರೇಟ್ಗಾಗಿ ಒದ್ದಾಡುತ್ತಿರುವುದನ್ನು ಮನಗಂಡ ಇಬ್ಬರು ಆನ್ಲೈನ್ ವಹಿವಾಟು ಶುರುಮಾಡಿದ್ರು. ಮೂನ್ಲೈಟ್ ಡೆಲಿವರೀಸ್ ಎಂಬ ಹೆಸರನ್ನೂ ಇಟ್ಟುಕೊಂಡ್ರು. ಅಗತ್ಯವಸ್ತುಗಳ ಮಾದರಿಯಲ್ಲೇ ಗ್ರಾಹಕರಿದ್ದಲ್ಲಿಗೇ ಹೋಗಿ ಡೆಲಿವರಿ ಕೊಡಲಾರಂಭಿಸಿದರು. ಆರಂಭದಲ್ಲಿ ಎಲ್ಲವೂ ಸರಿಯಾಗೇ ಇತ್ತು.
ಮೂನ್ಲೈಟ್ ಡೆಲಿವರೀಸ್ ಹೆಸರಿನಲ್ಲಿ ಪೋಸ್ಟ್ಗಳನ್ನು ಮಾಡುತ್ತಿದ್ದರು. ಯಾರು ಬೇಡಿಕೆ ಇರಿಸುತ್ತಾರೋ ಅಲ್ಲಿಗೆ ಹೋಗಿ ಡೆಲಿವರಿ ಕೊಡುತ್ತಿದ್ದರು. ಇವರ ಬಳಿ ದೇಶಿ ಹಾಗೂ ವಿದೇಶಿ ಸಿಗರೇಟ್, ಗುಟ್ಖಾಗಳಿದ್ದವು. ಇವರ ಈ ವಹಿವಾಟಿನ ಸುಳಿವು ಸಿಸಿಬಿ ಪೊಲೀಸರಿಗೆ ಸಿಕ್ಕಿತ್ತು. ಅವರು ಈ ಅತಿರೇಕದ ಸ್ಟಾರ್ಟಪ್ಗೆ ಬೀಗ ಹಾಕಲು ಪ್ಲ್ಯಾನ್ ರೂಪಿಸಿಕೊಂಡರು.
ಅದರಂತೆ, ಕಸ್ತೂರ್ಬಾ ರಸ್ತೆಯ ಗಣೇಶನ ದೇವಸ್ಥಾನದ ಬಳಿಗೆ ಸಿಗರೇಟ್ ಡೆಲಿವರಿ ಮಾಡಲು ಹೋಂಡಾ ಸಿಟಿ ಕಾರಿನಲ್ಲಿ ಬಂದ ಇವರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ರಿಚ್ಮಂಡ್ ಟೌನ್ ಅಗಾ ಅಬ್ದುಲ್ಲಾ ಸ್ಟ್ರೀಟ್ನ ಅಖ್ತರ್ ಮಿರ್ಜಾ ಬಿನ್ ಸಲೀಂ ಮಿರ್ಜಾ(28) ಮತ್ತು ಶಾಂತಿನಗರದ ಬರ್ಲಿನ್ ಸ್ಟ್ರೀಟ್ನ ತಸುಬುದ್ದೀನ್ ಮೊಯಿದ್ದೀನ್ ಬಿನ್ ಗೊಲ್ ಬುಸೇನ್ ಮೊಯಿದ್ದೀನ್(32) ಎಂದು ಗುರುತಿಸಲಾಗಿದೆ. ಇವರಿಂದ ಒಂದು ಹೊಂಡಾ ಸಿಟಿ ಕಾರು ಸೇರಿ 3 ಲಕ್ಷ ಬೆಲೆಬಾಳುವ ದೇಶಿ ಹಾಗೂ ವಿದೇಶಿ ಸಿಗರೇಟ್ ಗುಟ್ಖಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.