ಜಿಲ್ಲೆ

ಆನ್​ಲೈನ್ ಬೆಟ್ಟಿಂಗ್​: ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ನಿನ್ನೆಯಷ್ಟೇ ನಾಲ್ವರು ಮೃತಪಟ್ಟಿದ್ರು!

Mysuru Family : ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಸುಲಭವಾಗಿ ಹಣ ಗಳಿಸಬೇಕೆಂಬ ಆಸೆ ಇದೆ. ಒಮ್ಮೆಲೇ ಲಕ್ಷ ಲಕ್ಷ ಗಳಿಸುವ ಆಸೆಯಿಂದ ಆನ್​ಲೈನ್ ಗೇಮ್​ಗಳಿಗೆ ಅಡಿಕ್ಟ್ ಆಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಜನರು ಕ್ರಿಕೆಟ್ ಬೆಟ್ಟಿಂಗ್, ರಮ್ಮಿ, ಪಬ್ಜಿಯಂತಹ ಆನ್‌ಲೈನ್ ಬೆಟ್ಟಿಂಗ್​ ಬಲೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಕೆಲ ಕುಟುಂಬಗಳು ಬೀದಿ ಪಾಲಾಗಿವೆ. ಅಲ್ಲದೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತ ಸ್ಥಿತಿಯು ನಿರ್ಮಾಣವಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

ತಾಜಾ ಘಟನೆಯೊಂದರಲ್ಲಿ ಆನ್​ಲೈನ್ ಬೆಟ್ಟಿಂಗ್​ಗೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ. ಮೈಸೂರಿನಲ್ಲಿ ಈ ಘಟನೆ ನಡೆದಿದೆ. ಅಣ್ಣ ಜೋಷಿ ಆಂಟೋನಿ, ಸಹೋದರ ಜೋಬಿ ಆಂಟೋನಿ ಮತ್ತು ಈತನ ಪತ್ನಿ ಸ್ವಾತಿ ಅಲಿಯಾಸ್​ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಿನ್ನೆ ಅಣ್ಣ ಬಲಿಯಾದರೇ ಇಂದು ತಮ್ಮ ಹಾಗೂ ತಮ್ಮನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನ್​ಲೈನ್ ಗೇಮ್, ಹಣ ಡಬ್ಲಿಂಗ್ ಆಸೆಗೆ ಇಡೀ ಕುಟುಂಬವೇ ಸರ್ವನಾಶವಾಗಿದೆ. ಮೃತರು ಮೈಸೂರಿನ ವಿದ್ಯಾನಗರ ಹಾಗೂ ಯರಗನಹಳ್ಳಿ ನಿವಾಸಿಗಳಾಗಿದ್ದು, ಜೋಬಿ ಆಂಟೋನಿ ಹಾಗೂ ಜೋಷಿ‌ ಆಂಟೋನಿ ಅವಳಿ-ಜವಳಿ ಎನ್ನಲಾಗಿದೆ.

ನಿನ್ನೆಯಷ್ಟೇ ಸಾಲದ ಬಲೆಗೆ ಸಿಲುಕಿ ವಿದ್ಯಾರಣ್ಯಪುರಂನಲ್ಲಿ ನಾಲ್ವರು ಮೃತಪಟ್ಟಿದ್ದರು. ಒಂದೇ ಕುಟುಂಬದ ಕುಶಾಲ್( 15,) ಚೇತನ್( 45), ರೂಪಾಲಿ (43) ಮತ್ತು ಪ್ರಿಯಂವದ (65) ಸಾವಿಗೆ ಶರಣಾಗಿದ್ದರು. ಆರ್ಥಿಕ ಸಮಸ್ಯೆಯಿಂದಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಬೇರಾರೂ ಕಾರಣರಲ್ಲ. ದಯವಿಟ್ಟು ನಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ತೊಂದರೆ ಕೊಡಬೇಡಿ. ಐ ಆ್ಯಮ್​ ಸಾರಿ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಮಾಸುವ ಮುನ್ನವೇ ಈಗ ಮೂವರು ಬಲಿಯಾಗಿದ್ದಾರೆ.