ಸಾಂದರ್ಭಿಕ ಚಿತ್ರ 
ಜಿಲ್ಲೆ

ಎರಡನೇ ಮದ್ವೆಯಾಗಿ ಹೊಸ ಜೀವನದ ಕನಸು ಕಂಡಿದ್ದವಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ಯಾಗ್ ಕದ್ದು ಜೈಲುಪಾಲಾದ್ಲು...

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರವಾಸಿಗರ ಚಿನ್ನವಿದ್ದ ಬ್ಯಾಗ್ ಕಳವು ಮಾಡಿದ್ದ ಮಹಿಳೆಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಮತಾ (38) ಬಂಧಿತ ಆರೋಪಿ. ಈಕೆಯ ಪತಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. ಆರೋಪಿಯಿಂದ 20.2 ಲಕ್ಷ ರೂ. ಮೌಲ್ಯದ 439.32 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಈಕೆಯ ಮೊದಲ ಪತಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದು, ಹತ್ತಿರದ ಸಂಬಂಧಿ ಜತೆ ಇತ್ತೀಚೆಗೆ ಎರಡನೇ ಮದುವೆ ಆಗಿದ್ದಳು. ವಿವಾಹದ ಬಳಿಕ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿ ನಂತರ ಬೆಂಗಳೂರಿಗೆ ಹೋಗಿ ಜೀವನ ನಡೆಸಲು ನಿರ್ಧರಿಸಿದ್ದರು.

ಅದರಂತೆ ಆಗಸ್ಟ್ 19ರಂದು ಇಬ್ಬರೂ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಮರು ದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದರು.

ಧರ್ಮಸ್ಥಳದ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುವಾಗ ಪಕ್ಕದ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದ ಪ್ರವಾಸಿಗರು ಬ್ಯಾಗ್ ಇಟ್ಟು ಕೈ ತೊಳೆಯಲು ಹೋಗಿದ್ದರು. ಇತ್ತ ಹಣದ ಅವಶ್ಯಕತೆ ಇದ್ದ ಕಾರಣಕ್ಕೆ ಆರೋಪಿಗಳು ಬ್ಯಾಗ್ ಕಳವು ಮಾಡಿ ಅಲ್ಲಿಂದ ಪರಾರಿ ಆಗಿದ್ದರು. ನಿರ್ಜನ ಪ್ರದೇಶದಲ್ಲಿ ಬ್ಯಾಗ್ ತೆಗೆದುನೋಡಿದಾಗ ಬೆಲೆ ಬಾಳುವ ಚಿನ್ನಾಭರಣ ಇರುವುದು ಗೊತ್ತಾಗಿ ಖುಷಿಯಿಂದ ಬೆಂಗಳೂರಿಗೆ ಬಂದು ಲಗ್ಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು.

ಕಳವು ಮಾಡಿದ್ದ ಚಿನ್ನಾಭರಣವನ್ನು ಸ್ವಲ್ಪ ಅಡವಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆ. 25ರ ಬೆಳಗ್ಗೆ 10.20ರಲ್ಲಿ ಯಶವಂತಪುರ 1ನೇ ಮುಖ್ಯರಸ್ತೆಯ ಎಸ್.ಕೆ. ಜ್ಯುವೆಲರಿ ಅಂಗಡಿ ಬಳಿ ಚಿನ್ನ ಮಾರಾಟಕ್ಕೆ ಮಮತಾ ದಂಪತಿ ಬಂದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಗಸ್ತು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯುತ್ತಿದ್ದಂತೆ ಪತಿ ತಪ್ಪಿಸಿಕೊಂಡಿದ್ದಾನೆ.

ಮಮತಾಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಚಿನ್ನದ ಅಂಗಡಿಗಳಲ್ಲಿ ಅಡವಿಟ್ಟ 10 ರಸೀದಿಗಳು ಮತ್ತು 4 ಗ್ರಾಂ ಚಿನ್ನದ 2 ಉಂಗುರಗಳು ಪತ್ತೆಯಾಗಿವೆ. ಚಿನ್ನವನ್ನು ಕುಕ್ಕೆಯಲ್ಲಿ ಕಳವು ಮಾಡಿರುವ ವಿಷಯ ಬಾಯ್ಬಿಟ್ಟಿದ್ದಾಳೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಬಲೆಬೀಸಲಾಗಿದೆ. ಆನಂತರ ಬೇರೆ ಎಲ್ಲಾದರೂ ಅಪರಾಧ ಎಸಗಿದ್ದರೇ ಎಂಬುದನ್ನು ತಿಳಿಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.