ಹಾಸನ: ರಾಜ್ಯದಲ್ಲಿ ಕೆಲವು ದಿನಗಳ ಹಿಂದೆ ಒಂದರ ಹಿಂದೊಂದರಂತೆ ಎರಡು ದೊಡ್ಡ ಸ್ಫೋಟ ಪ್ರಕರಣಗಳು ನಡೆದಿದ್ದು, ಭಾರಿ-ನೋವೇ ಸಂಭವಿಸಿದೆ. ಇದೀಗ ಮತ್ತೊಂದು ಬ್ಲಾಸ್ಟ್ ಆಗಿದ್ದು, ಸ್ಫೋಟಕ ಸಾಮಗ್ರಿ ಸಿಡಿದು ಇಬ್ಬರು ಸಾವಿಗೀಡಾಗಿದ್ದರೆ, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆಯಲ್ಲಿನ ಗೋದಾಮಿನಲ್ಲಿ ಸಂಗ್ರಹಿಸಿಟಿದ್ದ ಸ್ಫೋಟಕ ಸಾಮಗ್ರಿಯನ್ನು ಸಾಗಿಸುವಾಗ ಅದು ಸಿಡಿದು ಅನಾಹುತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸಂಪತ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದರೆ, ನಟರಾಜ್ ಎಂಬಾತ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಇನ್ನೊಬ್ಬ ಕಾರ್ಮಿಕ ರವಿಕುಮಾರ್ಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತಪಟ್ಟಿರುವ ಇಬ್ಬರೂ ಹೊಳೆನರಸೀಪುರದ ಬೆಟ್ಟದಹಳ್ಳಿಯವರು ಎಂಬುದು ತಿಳಿದು ಬಂದಿದೆ.
ಈ ಗೋದಾಮಿಗೆ ಲೈಸೆನ್ಸ್ ಇದ್ದು, ನಾಗೇಶ್ ಎಂಬವರ ಮಾಲೀಕತ್ವದಲ್ಲಿದೆ ಎಂಬುದು ತಿಳಿದು ಬಂದಿದೆ. ಸ್ಫೋಟ ಸಂಭವಿಸಲು ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.